ಕಲಬುರಗಿ:ಅ.28: ಮಹಿಳಾ ಸಬಲೀಕರಣದ ಭಾಗವಾಗಿ ಮಹಿಳೆಯರಿಗೆ ಸಂವಿಧಾನಾತ್ಮಕ ಎಲ್ಲಾ ಸೌಲಭ್ಯಗಳು ದೊರೆಯುತ್ತಿವೆ. ಆದ್ದರಿಂದ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸ್ವಾವಲಂಭಿ ಜೀವನವನ್ನು ನಡೆಸುತ್ತಿದ್ದು, ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಮಹಿಳಾ ಸಬಲೀಕರಣ ಮತ್ತು ಸಮಾನತೆ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಚಿಂತಕಿ ಪೂಜಾ ಹೂಗಾರ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿನ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಸಂಜೆ ಜರುಗಿದ “53ನೇ ವಿಶ್ವ ಮಹಿಳಾ ಸಮಾನತೆ ದಿನಾಚರಣೆ”ಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡುತ್ತಿದ್ದರು.
ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ್ ಮಾತನಾಡಿ, ಮಹಿಳಾ ಸಮಾನತೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿರುವ ಸಾಧನೆಯ ಯಶಸ್ಸಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮಹಿಳಾ ಸಮಾನತೆ ದಿನದ ಉದ್ದೇಶವಾಗಿದೆ. ಯುನೈಟೆಡ್ ಸ್ಟೇಟ್ಸ್ ತನ್ನ ಸಂವಿಧಾನದಲ್ಲಿ ತಿದ್ದುಪಡಿ ತರುವ ಮೂಲಕ, ಎಲ್ಲಾ ಅಮೇರಿಕನ್ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕನ್ನು ನೀಡಲಾಯಿತು. ತದನಂತರ ಅಮೇರಿಕಾದಲ್ಲಿ ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ ಆಗಸ್ಟ್-26ರಂದು ಮಹಿಳಾ ಸಮಾನತೆ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು ಎಂದು ಆಚರಣೆಯ ಹಿನ್ನಲೆಯನ್ನು ವಿವರಿಸಿದರು.
ಪ್ರತಿಯೊಬ್ಬ ಮಹಿಳೆಯು ಶಿಕ್ಷಣವನ್ನು ಪಡೆಯಬೇಕು. ದೊರೆಯುವ ಸೌಕರ್ಯಗಳನ್ನು ಸದುಪಯೋಗಮಾಡಿಕೊಂಡು ಹೆಚ್ಚಿನ ಸಾಧನೆ ಮಾಡಬೇಕು. ಪ್ರಸ್ತುತವಾಗಿ ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದು ಹೆಮ್ಮೆಪಡುವ ಸಂಗತಿಯಾಗಿದೆ. ಮೌಢ್ಯತೆ, ಕಂದಾಚಾರ, ಅಂದಶೃದ್ಧೆಗಳಿಂದ ಹೊರಬಂದು, ವೈಚಾರಿಕತೆ ಮೈಗೂಡಿಸಿಕೊಳ್ಳಬೇಕು. ಮಹಿಳಾ ಸಮಾನತೆಗೆ ಬಸವಾದಿ ಶರಣರು, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕಿ ಕಾವೇರಿ ಹೌದೆ, ಪ್ರಮುಖರಾದ ಅಶ್ವಿನಿ ಚಿಂಚೋಳಿ, ಸರಸ್ವತಿ ಮುನ್ನಳ್ಳಿ, ಸಂಸ್ಥೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿದ್ದರು.
























