ಮಹಿಳಾ-ಮಕ್ಕಳ ದಸರಾ: ಆಕರ್ಷಕ ಸಾಂಸ್ಕೃತಿಕ ಚಟುವಟಿಕೆ ಆಯೋಜನೆ

ತುಮಕೂರು, ಸೆ. ೨೨- ಇಂದಿನಿಂದ ನಗರದಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಮಹಿಳೆ ಮತ್ತು ಮಕ್ಕಳ ದಸರಾ ಅಂಗವಾಗಿ ವಿಶೇಷ ಕಾರ್ಯಕ್ರಮ ನಡೆಸಲು ಸಮಿತಿ ಅಧ್ಯಕ್ಷರೂ ಆದ ನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಅವರ ಅಧ್ಯಕ್ಷತೆಯ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.


ನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬಿ.ವಿ.ಅಶ್ವಿಜ, ಸೆ. ೨೭ ರಂದು ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.


ಸಾರ್ವಜನಿಕರಿಗೆ ಆಹ್ವಾನ ನೀಡಿ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಲು ಕಳುಹಿಸಲು ಕೋರುವಂತೆ ಹೇಳಿದರು.


ಸೆ. ೨೯ ರಂದು ಮಹಿಳಾ ದಸರಾ ನಡೆಯಲಿದ್ದು, ಈ ಕಾರ್ಯಕ್ರಮದ ಉದ್ಘಾಟನೆಗೆ ರಾಜ್ಯಸಭಾ ಮಾಜಿ ಸದಸ್ಯೆ, ಹಿರಿಯ ರಂಗಭೂಮಿ ಕಲಾವಿದೆ ಬಿ. ಜಯಶ್ರೀ ಅವರನ್ನು ಆಹ್ವಾನಿಸಲು ಸಭೆ ತೀರ್ಮಾನಿಸಿತು.
ಅಂದು ಮಹಿಳೆಯರಿಂದ ದ್ವಿಚಕ್ರ ವಾಹನ ರೈಡ್ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವಿಕಲಚೇತನರೂ ಭಾಗವಹಿಸುತ್ತಿರುವುದು ವಿಶೇಷ. ಮಹಾ ನಗರ ಪಾಲಿಕೆ ಆವರಣದಿಂದ ಆರಂಭವಾಗುವ ರೈಡ್ ಅಶೋಕ ರಸ್ತೆ ಮೂಲಕ ಸಾಗಿ ಜಿಲ್ಲಾಧಿಕಾರಿಗಳ ಕಚೇರಿ, ಎಂ.ಜಿ.ರಸ್ತೆ, ಎಸ್.ಎಸ್. ಸರ್ಕಲ್ ಮಾರ್ಗವಾಗಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನ ತಲುಪಲಿದೆ ಎಂದು ಹೇಳಿದರು.


ಸಂಜೆ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಆಕರ್ಷಕ ಮಹಿಳಾ ಜಾನಪದ ಉತ್ಸವದಲ್ಲಿ ಹತ್ತು ಕಲಾ ತಂಡಗಳು ಪ್ರದರ್ಶನ ನೀಡಲಿವೆ. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ ಎಂದು ಬಿ.ವಿ.ಅಶ್ವಿಜ ತಿಳಿಸಿದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ. ಸಿದ್ಧರಾಮಣ್ಣ ಮಾತನಾಡಿ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಹಗ್ಗ ಜಗ್ಗಾಟ ಮತ್ತಿತರ ಚಟುವಟಿಕೆ ನಡೆಸಲಾಗುವುದು ಎಂದು ತಿಳಿಸಿದರು.
ನಗರಪಾಲಿಕೆ ಕೌನ್ಸಿಲ್ ಕಾರ್ಯದರ್ಶಿ ನಜ್ಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ದಿನೇಶ್, ಅಂಬಿಕಾ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಚಿದಾನಂದ್, ಮಹಿಳಾ ಮತ್ತು ಮಕ್ಕಳ ದಸರಾ ಸಮಿತಿ ಸದಸ್ಯರಾದ ಕುಮುದ, ಸಾ.ಚಿ.ರಾಜಕುಮಾರ್, ನಾಗಮಣಿ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ಅಭಿಯಾನ ವ್ಯವಸ್ಥಾಪಕ ದೊಡ್ಡವಲಪ್ಪ, ಸಮುದಾಯ ಸಂಘಟನಾಧಿಕಾರಿ ರಾಮಾಂಜಿನಪ್ಪ ಮತ್ತಿತರರು ಭಾಗವಹಿಸಿದ್ದರು.