ನಡೆದುಕೊಂಡು ಹೊರಟಿದ್ದ ಮಹಿಳೆ ಚಿನ್ನದ ಸರ ಕಳವು

ಕಲಬುರಗಿ,ಜ.13-ತರಕಾರಿ ಖರೀದಿಸಿ ಮನೆಗೆ ಹೋಗುತ್ತಿದ್ದ ಮಹಿಳೆಯೊಬ್ಬರ ಕೊರಳಲ್ಲಿನ ಚಿನ್ನದ ಸರ ಕಳವು ಮಾಡಿರುವ ಘಟನೆ ದತ್ತ ನಗರದ ಆಂಜನೇಯ ಸ್ವಾಮಿ ಕಮಾನ್ ಹತ್ತಿರ ನಡೆದಿದೆ.
ಕೀರ್ತಮ್ಮ ಚಂದ್ರಾರೆಡ್ಡಿ ಎಂಬುವವರು ತರಕಾರಿ ಖರೀದಿಸಿ ಮನೆಯ ಕಡೆ ಹೋಗುತ್ತಿದ್ದಾಗ ಬೈಕ್ ಮೇಲೆ ಬಂದ 25 ರಿಂದ 30 ವರ್ಷ ವಯಸ್ಸಿನ ಇಬ್ಬರು ಅಪರಿಚಿತ ಯುವಕರು ಶ್ರೀನಿವಾಸ ಡಾಕ್ಟರ್ ಮನೆ ಎಲ್ಲಿದೆ ಎಂದು ವಿಚಾರಿಸಿದಂತೆ ಮಾಡಿ ಮಹಿಳೆ ಕೊರಳಲ್ಲಿನ 1.60 ಲಕ್ಷ ರೂ.ಮೌಲ್ಯದ 40 ಗ್ರಾಂ.ಬಂಗಾರದ ಎರಡೆಳೆಯ ಬಂಗಾರದ ಸರ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಆಗ ಮಹಿಳೆ ಎಚ್ಚೆತ್ತು ಸರ ಗಟ್ಟಿಯಾಗಿ ಹಿಡಿದಿದ್ದರಿಂದ ಅದು ತುಂಡಾಗಿ 2 ಗ್ರಾಂ.ಮಾತ್ರ ಇವರ ಬಳಿ ಉಳಿದಿದೆ. ಉಳಿದ 38 ಗ್ರಾಂ.ಚಿನ್ನದ ಸರ ಸರಗಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.