
ಹಾನಗಲ್,ಮೇ28: ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಮೂಲಕ ಸಾಧಕರಿಗೆ ಸ್ಪೂರ್ತಿ ತುಂಬುವ ಕೆಲಸ ಆಗಬೇಕಿದೆ. ಸಾಧನೆಗೆ ಇಚ್ಛಾಶಕ್ತಿ ಅತ್ಯವಶ್ಯ. ಕಲಿಕೆಯ ಹಂಬಲ ವಿದ್ಯಾರ್ಥಿಗಳಲ್ಲಿ ಇರಬೇಕು. ಗ್ರಾಮೀಣ ಪ್ರತಿಭೆಗಳಿಗೆ ಒಳ್ಳೆಯ ಅವಕಾಶ ಕಲ್ಪಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚು ಕಾಳಜಿ ವಹಿಸಿ ಕೆಲಸ ಮಾಡುತ್ತಿರುವುದಾಗಿ ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಇಲ್ಲಿನ ಹ್ಯುಮ್ಯಾನಿಟಿ ಫೌಂಡೇಶನ್‍ನ ಪರಿವರ್ತನ ಕಲಿಕಾ ಕೇಂದ್ರದಲ್ಲಿ ಟೀಂ ಆಪತ್ಬಾಂಧವ ಆಶ್ರಯದಲ್ಲಿ ತಾಲೂಕಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ರಾಜ್ಯ, ಜಿಲ್ಲಾ, ತಾಲೂಕು ಮತ್ತು ಶಾಲೆ, ಕಾಲೇಜು ಮಟ್ಟದಲ್ಲಿ ಪ್ರತಿಭೆ ಪ್ರದರ್ಶಿಸಿ ಅತ್ಯುತ್ತಮ ಫಲಿತಾಂಶಕ್ಕೆ ಸಾಕ್ಷಿಯಾದ 350 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಒಟ್ಟು 5 ಲಕ್ಷ ರೂ. ಮೊತ್ತದ ನಗದು ಪುರಸ್ಕಾರ, ಪ್ರಶಂಸನಾ ಪತ್ರ ಹಾಗೂ ಕಲಿಕಾ ಪುಸ್ತಕ ವಿತರಿಸಿ ಅವರು ಮಾತನಾಡಿದರು. ಯುವ ಸಬಲೀಕರಣವೇ ಆದ್ಯತೆಯಾಗಿ ತಂತ್ರಜ್ಞಾನದ ಸಹಾಯವನ್ನೂ ಪಡೆದು ಸ್ವಾವಲಂಬಿ, ಸೌಹಾರ್ದ ಬದುಕನ್ನು ಧ್ಯೇಯವಾಗಿಸಿಕೊಂಡು, ಉತ್ತಮ ಶಿಕ್ಷಣದ ಮೂಲಕ ಅತ್ಯುತ್ತಮ ಸಾರ್ಥಕ ಜೀವನ ಕಟ್ಟಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕಿದೆ ಎಂದರು.
ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಕಾಲ ಈಗ ಉಳಿದಿಲ್ಲ. ಅಲ್ಲಿಯೂ ಅತ್ಯಂತ ಪ್ರತಿಭಾವಂತ ಗುರುವೃಂದ, ಅತ್ಯುತ್ತಮ ಸೌಲಭ್ಯಗಳು ಲಭ್ಯವಾಗುತ್ತಿವೆ. ಸರಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ರ್ಯಾಂಕ್ ಬರುತ್ತಿದ್ದಾರೆ. ಹಾನಗಲ್ ತಾಲೂಕಿನಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಸರಕಾರಿ ಶಾಲೆಗಳಿಗೆ ಸೌಲಭ್ಯ ಒದಗಿಸಲು ಮುಂದಾಗಿದ್ದೇವೆ. ಸರಕಾರದ ಅನುದಾನ ಹೊರತುಪಡಿಸಿ ಸಮುದಾಯದ ಸಹಭಾಗಿತ್ವದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ 95 ಶಾಲೆಗಳ ಅಭಿವೃದ್ಧಿಗೆ ಸಾಕ್ಷಿಯಾಗಿದ್ದೇವೆ. ನಾಳಿನ ಪೀಳಿಗೆಗಾಗಿ ಯೋಜನೆಗಳನ್ನು ರೂಪಿಸಬೇಕಿದೆ ಎಂದರು.
ಪರಿಸರದ ಮುನಿಸಿನಿಂದಾಗಿ ಪ್ರಕೃತಿ ವಿಕೋಪಗಳು, ಬರಗಾಲ, ಅತೀವೃಷ್ಟಿ ಸೇರಿದಂತೆ ಹಲವು ಸಂಕಷ್ಟಗಳು ರೈತರನ್ನು ಕಾಡುತ್ತವೆ. ಈ ಮೂಲಕ ಸರಕಾರಕ್ಕೂ ಆರ್ಥಿಕ ಹಿನ್ನಡೆಯಾಗುತ್ತದೆ. ಇದೆಲ್ಲವನ್ನೂ ನಿಭಾಯಿಸಿಯೂ ಕೂಡ ಸರಕಾರಗಳು ಶೈಕ್ಷಣಿಕ ವ್ಯವಸ್ಥೆಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತಿವೆ. ನಿರುದ್ಯೋಗ ಸಮಸ್ಯೆ ಇದೆ ಎಂದು ಕೂತರೆ ಆಗದು. ಪ್ರತಿಭಾವಂತರಿಗೆ ಔದ್ಯೋಗಿಕ ಕ್ಷೇತ್ರದಲ್ಲಿ ಖಾಸಗಿ ವಲಯದಲ್ಲಿ ಅತ್ಯುತ್ತಮ ಅವಕಾಶಗಳಿವೆ. ಅದಕ್ಕಾಗಿ ಪರಿಶ್ರಮಿಸಿದರೆ ಎಲ್ಲವನ್ನೂ ಜಯಿಸಲು ಸಾಧ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ ಮಾತನಾಡಿ, ಹಾನಗಲ್ಲ ತಾಲೂಕಿನ ಸರಕಾರಿ ಪೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ಶಾಸಕ ಶ್ರೀನಿವಾಸ ಮಾನೆ ಅವರ ನೇತೃತ್ವದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಉತ್ತಮ ಜ್ಞಾನಕ್ಕಾಗಿ ಅವಕಾಶ ಕಲ್ಪಿಸಿದ್ದಾರೆ. ಶಾಲೆಗಳ ಅಭಿವೃದ್ಧಿಯ ಕನಸು ನನಸಾಗುತ್ತಿದೆ. ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಗಣನೀಯ ಸುಧಾರಣೆ ಕಾಣುತ್ತಿದೆ. ಎನ್‍ಎಂಎಂಎಸ್ ಪರೀಕ್ಷೆಯಲ್ಲಿಯೂ ತಾಲೂಕಿನ ವಿದ್ಯಾರ್ಥಿಗಳು ಸಾಧನೆ ಮೆರೆಯುತ್ತಿದ್ದಾರೆ ಎಂದರು.
ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ಪರಿವರ್ತನ ಕಲಿಕಾ ಕೇಂದ್ರದ ಮೂಲಕ ಶೈಕ್ಷಣಿಕ ತರಬೇತಿ ಪಡೆದ ವಿದ್ಯಾರ್ಥಿಗಳು ಪರೀಕ್ಷಾ ಉತ್ತಮ ಫಲಿತಾಂಶ ಗಳಿಸಿ, ಅತ್ಯುತ್ತಮ ಉದ್ಯೋಗಾವಕಾಶಗಳಿಗೂ ಸಾಕ್ಷಿಯಾಗಿದ್ದಾರೆ. ತಾಲೂಕಿನ ಪ್ರತಿಭಾವಂತರನ್ನು ಗೌರವಿಸುವ ಮೂಲಕ ಯುವ ಪೀಳಿಗೆಯನ್ನು ಪ್ರೋತ್ಸಾಹಿಸುತ್ತಿರುವುದು ಅತ್ಯಂತ ಅಭಿನಂದನಾರ್ಹ ಕಾರ್ಯ ಎಂದರು.
ತಾಲೂಕಾ ಮಟ್ಟದ ಶೈಕ್ಷಣಿಕ ಸುಧಾರಣಾ ಸಮಿತಿ ಸದಸ್ಯರಾದ ಮೆಹಬೂಬ ಬ್ಯಾಡಗಿ, ಅನಿತಾ ಶಿವೂರ, ಬಸವರಾಜ ಚವ್ಹಾಣ, ಬಿ.ಎಸ್.ಕರೆಣ್ಣನವರ, ಚಂದ್ರಶೇಖರ ಗೂಳಿ, ಹೆಗ್ಗಪ್ಪ ಕಾಮನಹಳ್ಳಿ, ಅಬ್ದುಲ್‍ಗನಿ ಪಟೇಲ, ಮಂಜು ಗೊರಣ್ಣನವರ, ಶಿವು ತಳವಾರ ಸೇರಿದಂತೆ ಇನ್ನೂ ಹಲವರು ಇದ್ದರು. ಸಿದ್ದು ಗೌರಣ್ಣನವರ ನಿರೂಪಿಸಿ, ವಂದಿಸಿದರು.