
ರುದ್ರಪ್ಪ ಆಸಂಗಿ
ವಿಜಯಪುರ, ಜು. 7:
ಇತಿಹಾಸವನ್ನು ಕಟ್ಟಿದ ಈ ನೆಲ ಇಂದು ತನ್ನ ಭವಿಷ್ಯವನ್ನು ಕಟ್ಟಿಕೊಳ್ಳಲು ಕಾಯುತ್ತಿದೆ. ಗೋಲಗುಮ್ಮಟದ ವೈಭವದಿಂದ ವಿಶ್ವದ ಗಮನ ಸೆಳೆದ ವಿಜಯಪುರ, ಕೃಷ್ಣೆಯ ಕರುಣೆಯಿಂದ ಸಮೃದ್ಧವಾಗಬೇಕಿದ್ದ ವಿಜಯಪುರ, ಇಂದು ಮಾತ್ರ ಅಭಿವೃದ್ಧಿಯ ಪಥದಲ್ಲಿ ಇನ್ನೂ ನಿರೀಕ್ಷೆಯ ಹೆಜ್ಜೆಗಳನ್ನೇ ಎಣಿಸುತ್ತಿದೆ.
ಒಂದು ಕಡೆ ಅನಾವೃಷ್ಟಿ, ಮತ್ತೊಂದು ಕಡೆ ಅತಿವೃಷ್ಟಿ. ಒಂದು ವರ್ಷ ಮೋಡಗಳು ಮರೆವಾದರೆ ಬರದ ಬವಣೆ; ಮತ್ತೊಂದು ವರ್ಷ ಮಳೆ ಆರ್ಭಟಿಸಿದರೆ ಬೆಳೆಗಳೇ ನೀರುಪಾಲು. ಪ್ರಕೃತಿಯ ಈ ಎರಡು ಅತಿರೇಕಗಳ ನಡುವೆ ವಿಜಯಪುರದ ರೈತ ದಶಕಗಳಿಂದ ತನ್ನ ಬದುಕಿನ ಭರವಸೆಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾನೆ. ಹೀಗಾಗಿ “ಬರದ ಜಿಲ್ಲೆ” ಎಂಬ ಹಣೆಪಟ್ಟಿ ಇನ್ನೂ ಸಂಪೂರ್ಣವಾಗಿ ಅಳಿದು ಹೋಗಿಲ್ಲ.
ಇದು ಕೇವಲ ಪ್ರಕೃತಿಯ ವೈಪರೀತ್ಯವಲ್ಲ; ದೀರ್ಘಕಾಲದ ದೂರದೃಷ್ಟಿಯ ಅಭಿವೃದ್ಧಿ ಯೋಜನೆಗಳ ಕೊರತೆಯನ್ನೂ ನೆನಪಿಸುವ ಕಹಿ ವಾಸ್ತವ.
ಕೃಷ್ಣಾ ನದಿ ಜಿಲ್ಲೆಯ ಮಣ್ಣನ್ನು ಸವರುತ್ತಾ ಹರಿಯುತ್ತಿದ್ದರೂ, ಅದರ ನೀರು ಜಿಲ್ಲೆಯ ಪ್ರತಿಯೊಂದು ಹೊಲದವರೆಗೆ ಸಮರ್ಪಕವಾಗಿ ತಲುಪಿದೆಯೇ? ನೀರಾವರಿ ಯೋಜನೆಗಳು ಎಲ್ಲ ರೈತರ ಬದುಕಿಗೆ ಆಶಾಕಿರಣವಾಗಿವೆಯೇ? ಕೈಗಾರಿಕೆಗಳು ಯುವಕರಿಗೆ ಉದ್ಯೋಗದ ಬಾಗಿಲು ತೆರೆದಿವೆಯೇ? ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯ ಹೊಸ ಬೆಳಕನ್ನು ಕಂಡಿವೆಯೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದಾಗ ಇನ್ನೂ ಅಪೂರ್ಣತೆಯ ಚಿತ್ರವೇ ಕಣ್ಣಿಗೆ ಬೀಳುತ್ತದೆ.
ಸಿದ್ಧೇಶ್ವರ ಶ್ರೀಗಳ ಆಶಯಕ್ಕೆ ಮನ್ನಣೆ ಯಾವಾಗ?
ಜ್ಞಾನ ಯೋಗಾಶ್ರದ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ತಮ್ಮ ಜೀವಮಾನದುದ್ದಕ್ಕೂ ಒಂದು ಮಾತನ್ನು ನಿರಂತರವಾಗಿ ಪ್ರತಿಪಾದಿಸುತ್ತಿದ್ದರು-“ಜಿಲ್ಲೆಯ ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯಕ್ಕೆ ಅವಕಾಶ ಇರಬಾರದು; ಪಕ್ಷಗಳು ಬೇರೆ ಇರಬಹುದು, ಆದರೆ ಜಿಲ್ಲೆಯ ಹಿತಾಸಕ್ತಿ ಒಂದೇ ಆಗಿರಬೇಕು.” ಇದು ಕೇವಲ ಒಂದು ಸಲಹೆಯಾಗಿರಲಿಲ್ಲ; ವಿಜಯಪುರದ ಭವಿಷ್ಯಕ್ಕಾಗಿ ಅವರು ನೀಡಿದ ದಾರಿದೀಪವಾಗಿತ್ತು.
ಇಂದು ವಿಜಯಪುರ ಜಿಲ್ಲೆಗೆ ಪ್ರಭಾವಿ ರಾಜಕೀಯ ನಾಯಕತ್ವವಿದೆ. ಸಚಿವರು, ಶಾಸಕರು, ಸಂಸದರು, ವಿವಿಧ ಪಕ್ಷಗಳ ಹಿರಿಯ ನಾಯಕರು-ಎಲ್ಲರೂ ಇದ್ದಾರೆ. ಆದರೆ ಇತಿಹಾಸ ಕೇಳುತ್ತಿರುವ ಪ್ರಶ್ನೆ ಒಂದೇ: ಈ ನಾಯಕತ್ವ ಅಭಿವೃದ್ಧಿಯ ಗುರಿಗಾಗಿ ಒಂದೇ ವೇದಿಕೆಯಲ್ಲಿ ನಿಲ್ಲುವ ದಿನ ಯಾವಾಗ?
ಅಭಿವೃದ್ಧಿಯ ಮೊದಲ ಮಳೆ ಹನಿಗಾಗಿ ಕಾಯುತ್ತಿರುವ ಜನರು
ಚಾತಕ ಪಕ್ಷಿಯು ಸ್ವಾತಿ ನಕ್ಷತ್ರದ ಮಳೆಹನಿಗಾಗಿ ಆಕಾಶದತ್ತ ಕಣ್ಣಿಟ್ಟು ಕಾಯುವಂತೆ, ವಿಜಯಪುರದ ಜನತೆ ಅಭಿವೃದ್ಧಿಯ ಮೊದಲ ಮಳೆಹನಿಗಾಗಿ ದಶಕಗಳಿಂದ ಕಾತರದಿಂದ ಕಾಯುತ್ತಿದ್ದಾರೆ. ಚುನಾವಣೆಗಳು ಬಂದವು, ಸರ್ಕಾರಗಳು ಬದಲಾದವು, ಭರವಸೆಗಳು ಮೊಳಗಿದವು, ಘೋಷಣೆಗಳು ಕೇಳಿಬಂದವು. ಆದರೆ ಜಿಲ್ಲೆಯ ಅಭಿವೃದ್ಧಿಯ ಪಯಣ ಜನರು ಕನಸು ಕಂಡ ವೇಗದಲ್ಲಿ ಸಾಗಲಿಲ್ಲ ಎಂಬ ನೋವು ಇನ್ನೂ ಅಳಿಯಿಲ್ಲ.
ನಿಜವಾದ ಅಭಿವೃದ್ಧಿಯ ಸಾಕಾರ ಎಂದು?
ವಿಜಯಪುರದ ಅಭಿವೃದ್ಧಿ ಎಂದರೆ ಕೇವಲ ಹೊಸ ಕಟ್ಟಡಗಳು, ರಸ್ತೆಗಳು ಅಥವಾ ಕಚೇರಿಗಳ ನಿರ್ಮಾಣವಲ್ಲ. ಪ್ರತಿಯೊಂದು ಹೊಲಕ್ಕೂ ನೀರು ತಲುಪುವುದು, ರೈತನ ಮುಖದಲ್ಲಿ ನೆಮ್ಮದಿಯ ನಗು ಮೂಡುವುದು, ಯುವಕರಿಗೆ ತಮ್ಮ ಊರಲ್ಲೇ ಉದ್ಯೋಗ ಸಿಗುವುದು, ಕೈಗಾರಿಕೆಗಳು ಹೂಡಿಕೆ ಮಾಡುವುದು, ಮಹಿಳೆಯರಿಗೆ ಸ್ವಾವಲಂಬನೆಯ ಅವಕಾಶಗಳು ಹೆಚ್ಚುವುದು, ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಇನ್ನಷ್ಟು ಬಲವಾಗುವುದು-ಇವೆಲ್ಲವೂ ಸೇರಿ ನಿಜವಾದ ಅಭಿವೃದ್ಧಿಯ ಅರ್ಥ. ಇವು ಸಾಕಾರವಾಗುವುದು ಎಂದು? ಎನ್ನುವ ಪ್ರಶ್ನೆಯನ್ನು ಜನ ನಿತ್ಯವೂ ಕೇಳುತ್ತಿದ್ದಾರೆ. ಇದಕ್ಕೆ ಸಮಾಧಾನಕರ ಉತ್ತರ ಇನ್ನೂ ಸಿಕ್ಕಿಲ್ಲ.
ಇನ್ನಾದರೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಕೈಗಾರಿಕೋದ್ಯಮಿಗಳು, ರೈತ ಸಂಘಟನೆಗಳು ಹಾಗೂ ನಾಗರಿಕ ಸಮಾಜ ಒಂದೇ ಸಂಕಲ್ಪದೊಂದಿಗೆ ಮುಂದೆ ಬರಬೇಕಾಗಿದೆ. ವಿಜಯಪುರಕ್ಕೆ ಪ್ರತ್ಯೇಕ ಸಮಗ್ರ ಅಭಿವೃದ್ಧಿ ನೀಲನಕ್ಷೆ ರೂಪುಗೊಂಡು, ನೀರಾವರಿ, ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ, ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ದೀರ್ಘಾವಧಿಯ ಯೋಜನೆಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸುವ ಸಂಕಲ್ಪ ಮೂಡಬೇಕಾಗಿದೆ.
ಜಿಲ್ಲೆಯ ಜನರಿಗೆ ಈಗ ಮಾತು ಬೇಕಿಲ್ಲ, ಸಮಗ್ರ ಅಭಿವೃದ್ಧಿ ಬೇಕಿದೆ
ವಿಜಯಪುರದ ಜನರು ಈಗ ಮಾತುಗಳನ್ನು ಕೇಳಲು ಕಾಯುತ್ತಿಲ್ಲ; ಬದಲಾವಣೆಯನ್ನು ನೋಡಲು ಕಾಯುತ್ತಿದ್ದಾರೆ. ಭರವಸೆಗಳನ್ನು ನಂಬಲು ಅಲ್ಲ; ಫಲಿತಾಂಶಗಳನ್ನು ಅನುಭವಿಸಲು ಕಾಯುತ್ತಿದ್ದಾರೆ.
ಇಂದು ಜಿಲ್ಲೆಯ ಮೂಲೆಮೂಲೆಗಳಿಂದ ಒಂದೇ ಧ್ವನಿ ಕೇಳಿಬರುತ್ತಿದೆ-
“ವಿಜಯಪುರದಲ್ಲಿ ಅಭಿವೃದ್ಧಿಯ ಶೆಕೆ ಇನ್ನಾದರೂ ಉದಯಿಸಲಿ. ಬರದ ಹಣೆಪಟ್ಟಿ ಶಾಶ್ವತವಾಗಿ ಅಳಿಯಲಿ. ಹಸಿರು ಹೊಲಗಳು ಜಿಲ್ಲೆಯ ಹೊಸ ಗುರುತಾಗಲಿ. ರೈತನ ಬೆವರಿನ ಹನಿ ಸಮೃದ್ಧಿಯ ಫಲವಾಗಿ ಮರಳಲಿ. ಯುವಕರ ಕನಸುಗಳಿಗೆ ತಮ್ಮ ನೆಲದಲ್ಲೇ ರೆಕ್ಕೆಗಳು ಮೂಡಲಿ. ವಿಜಯಪುರ ಅಭಿವೃದ್ಧಿಯ ಹೊಸ ಯುಗಕ್ಕೆ ಕಾಲಿಡಲಿ.”
ಇದು ಕೇವಲ ಒಂದು ಜಿಲ್ಲೆಯ ಕನಸಲ್ಲ; ಲಕ್ಷಾಂತರ ಜನರ ಬದುಕಿನ ಆಶಯ.
ಜಿಲ್ಲೆಯಲ್ಲಿ ಅಭಿವೃದ್ಧಿಯ ಮಳೆಹನಿ ಯಾವಾಗ?
ಅಭಿವೃದ್ಧಿಯ ಮಳೆಹನಿಗಾಗಿ ಚಾತಕ ಪಕ್ಷಿಯಂತೆ ಆಕಾಶದತ್ತ ಕಣ್ಣಿಟ್ಟು ಕಾಯುತ್ತಿರುವ ವಿಜಯಪುರದ ಜನತೆಗೆ ಆ ಮಳೆ ಯಾವಾಗ ಸುರಿಯಲಿದೆ?
ಆ ಪ್ರಶ್ನೆಗೆ ಉತ್ತರವನ್ನು ಭಾಷಣಗಳು ನೀಡುವುದಿಲ್ಲ; ಒಗ್ಗಟ್ಟು, ದೂರದೃಷ್ಟಿ ಮತ್ತು ಅಭಿವೃದ್ಧಿಯತ್ತ ಇರುವ ದೃಢಸಂಕಲ್ಪ ಮಾತ್ರ ನೀಡಬಲ್ಲದು. ವಿಜಯಪುರ ಇತಿಹಾಸವನ್ನು ನಿರ್ಮಿಸಿದೆ; ಈಗ ಅಭಿವೃದ್ಧಿಯ ಹೊಸ ಇತಿಹಾಸವನ್ನು ನಿರ್ಮಿಸುವ ಸಮಯ ಬಂದಿದೆ. ಅದಕ್ಕೆ ಎಲ್ಲರ ಒಗ್ಗಟ್ಟಿನ ಧ್ವನಿ ಬೇಕಿದೆ.































