ಪತಿ ಲಟ್ಟಣಿಗೆ ಏಟಿಗೆ ಪ್ರಾಣಬಿಟ್ಟ ಪತ್ನಿ

ಬೆಂಗಳೂರು,ಅ.೬- ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದಲ್ಲಿ ಪತ್ನಿಯ ತಲೆಗೆ ಲಟ್ಟಣಿಗೆಯಿಂದ ಹೊಡೆದು ಪತಿ ಕೊಲೆಮಾಡಿರುವ ದುರ್ಘಟನೆ ಪೀಣ್ಯದ ಬಳಿಯ ಚೊಕ್ಕಸಂದ್ರದಲ್ಲಿ ನಡೆದಿದೆ.


ಮಧ್ಯಪ್ರದೇಶ ಮೂಲದ ಪ್ರೀತಿ ಸಿಂಗ್ (೨೬) ಕೊಲೆಯಾದವರು, ಕೃತ್ಯ ನಡೆಸಿದ ಪತಿ ಛೋಟೆಲಾಲ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.


ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಛೋಟೆಲಾಲ್ ಸಿಂಗ್ ಹಾಗೂ ಪ್ರೀತಿ ಸಿಂಗ್ ಚೊಕ್ಕಸಂದ್ರದಲ್ಲಿ ವಾಸಿಸುತ್ತಿದ್ದು,ಕಳೆದ ಸೆ. ೨೪ರಂದು ನಡೆದಿದ್ದ ಜಗಳದಲ್ಲಿ ನೀರು ಕೇಳಿದ ಪತಿಗೆ ಕೊಡದೇ ಇದ್ದಾಗ ಮದ್ಯಸೇವಿಸಿ ಬಂದಿದ್ದ ಛೋಟೆಲಾಲ್ ಲಟ್ಟಣಿಗೆಯಲ್ಲಿ ಪತ್ನಿಯ ತಲೆಗೆ ಬೀಸಿದ್ದಾನೆ.


ಪತಿಯ ಏಟಿಗೆ ಗಂಭೀರವಾಗಿ ಗಾಯಗೊಂಡ ಪತ್ನಿ ಪ್ರೀತಿ ಅಲ್ಲೇ ಕೋಮಾಗೆ ಜಾರಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗಿತ್ತು, ಚಿಕಿತ್ಸೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಪ್ರೀತಿ ಕೊನೆಯುಸಿರೆಳೆದಿದ್ದಾಳೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಛೋಟೆಸಿಂಗ್‌ನನ್ನು ಬಂಧಿಸಿರುವ ಪೀಣ್ಯ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.