
ಔರಾದ್ :ನ.12: ಮನುಷ್ಯ ತನ್ನಲ್ಲಿರುವ ಸ್ವಾರ್ಥ ಬಿಟ್ಟಾಗ ಮಾತ್ರವೇ ಮಾನವ ವಿಶ್ವ ಮಾನವನಾಗಲು ಸಾಧ್ಯ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಾಲಾಜಿ ಅಮರವಾಡಿ ಅಭಿಪ್ರಾಯಪಟ್ಟರು.
ತಾಲೂಕಿನ ವನಮಾರಪಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತಾಲೂಕು ಕಸಾಪ ವತಿಯಿಂದ ಜರುಗಿದ “ಮನುಜಮತ ವಿಶ್ವಪಥ” ವಿಶ್ವ ಮಾನವ ಸಂಕಲ್ಪ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾವು ನಮ್ಮಲ್ಲಿರುವ ಕಂದಾಚಾರಗಳನ್ನು ಬಿಟ್ಟು ಎಲ್ಲರೂ ನಮ್ಮವರೇ ನಾವೆಲ್ಲರೂ ಒಂದೇ ಎಂದು ತಿಳಿದು, ಜಾತಿ ಭೇದ ಮರೆತು ಒಂದಾಗಿ ಬಾಳಿದಾಗ ಮನುಜ ಮತ ವಿಶ್ವಪಥವಾಗುತ್ತದೆ.
ಪ್ರಪಂಚದಲ್ಲಿ ಬುದ್ಧಿ ಶಕ್ತಿ ಹೊಂದಿರುವ ಏಕೈಕ ಪ್ರಾಣಿ ಮಾನವ, ಆದರೆ ಆ ಬುದ್ಧಿ ಶಕ್ತಿಯನ್ನು ನಾವು ದ್ವೇಷಕ್ಕೆ, ಸ್ವಾರ್ಥಕ್ಕೆ ಬಳಸಿಕೊಳ್ಳಲು ದುಂಬಾಲು ಬಿದ್ದಿರುವುದು ಶೋಚನೀಯ, ಆದ್ದರಿಂದ ನಾವು ನಮ್ಮ ನೆರೆಯ ಸುತ್ತ ಮುತ್ತಲಿನ ಜನರ ಹೃದಯ ಗೆಲ್ಲಲು ಸಾಧ್ಯವಾಗುತ್ತಿಲ್ಲ, ಇಂದು ಮನುಷ್ಯ ಜಾತಿಯಿಂದ, ದುಡ್ಡಿನಿಂದ ಶ್ರೇಷ್ಠ ಎಂದು ಮೆರೆಯುತ್ತಿದ್ದಾನೆ ಅದೆಲ್ಲ ಮರೆತು ಎಲ್ಲರೂ ನಮ್ಮವರೇ ಎಂದು ಬಾಳಿದಾಗ ರಾಷ್ಟ್ರ ಕವಿ ಕುವೆಂಪು ಅವರ ಸಂಕಲ್ಪ ಸಾಕಾರಗೊಳಿಸಲು ಸಾಧ್ಯ ಎಂದರು.
ವಿದ್ಯಾರ್ಥಿಗಳ ಓದು ಪರೀಕ್ಷೆಗೆ ಸೀಮಿತ ಆಗಬಾರದು, ಅದು ಜೀವನ ರೂಪಿಸಿಕೊಳ್ಳಲು ಓದಿದಾಗ ಬದುಕು ಹಸನಾಗುತ್ತದೆ. ವಿದ್ಯಾರ್ಥಿಗಳು ಸಾಹಿತ್ಯ ರುಚಿ ಬೆಳೆಸಿಕೊಳ್ಳಬೇಕು ಸ್ವತಃ ಸಾಹಿತ್ಯ ರಚನೆ ಮಾಡಬೇಕು, ತಮ್ಮ ಲಿಪಿಯ ಮೂಲಕ ಸಾಮಾಜಿಕ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಬೇಕು. ಯಾವ ಭಾಷೆ ಕಲಿತರು ಕನ್ನಡಕ್ಕೆ ತಾಯಿ ಸ್ಥಾನ ನೀಡಿದಾಗ ಮಾತೃಭಾಷೆ ಎಂದಿಗೂ ಜೀವಂತ ಎಂದು ತಿಳಿಸಿದರು.
ಪ್ರಾಚಾರ್ಯ ಶಿವಾಜಿ ಪವಾರ ಅವರು ಮಾತನಾಡಿ ಗಡಿ ಭಾಗದ ಈ ವಾತಾವರಣದಲ್ಲಿ ಕನ್ನಡ ಪಸರಿಸುವ ಕಾರ್ಯ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಬಳಗದ ಕಾರ್ಯ ಶ್ಲಾಘನೀಯವಾದದ್ದು, ನಾವೆಲ್ಲರೂ ನಾಡು, ನುಡಿ, ಜಲ, ಭಾಷೆಗೆ ಗೌರವಿಸುವ ಕಾರ್ಯ ಮಾಡಬೇಕು, ಎರಡು ರಾಜ್ಯಗಳ ಗಡಿ ಹಂಚಿಕೊಂಡಿರುವ ನಮ್ಮ ಮೇಲೆ ಮೂರು ಭಾಷೆಗಳ ಪ್ರಭಾವ ಇದೆ, ನಮ್ಮಲ್ಲಿ ನಾವು ಕನ್ನಡಿಗರಾಗಿ ಕನ್ನಡ ಭಾಷೆಯಲ್ಲಿ ಅನುತ್ತಿರ್ಣರಾಗುವುದು ನೋಡುತ್ತೇವೆ, ನಾವು ನಮ್ಮ ಕನ್ನಡ ಭಾಷೆಗೆ ಮಾನ್ಯತೆ ಕೊಟ್ಟು ಅಭ್ಯಾಸ ಮಾಡಬೇಕು, ಕನ್ನಡ ಉಳಿಸಿ ಬೆಳೆಸುವ ಕಾರ್ಯ ದಲ್ಲಿ ನಾವೆಲ್ಲರೂ ಒಂದಾಗಿ ಭಾಷೆ ಬೆಳವಣಿಗೆಗೆ ಕಾರ್ಯ ಮಾಡೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಾಜಿ ಬಿರಾದಾರ, ನಾಗನಾಥ ಮೋರಗೆ, ರಾಮದಾಸ ಪಾಟೀಲ, ಕನ್ನಡ ಸೇನೆ ಸಂಘಟನೆಯ ಅಧ್ಯಕ್ಷ ಶಿವಶಂಕರ ನಿಸ್ಪತೆ, ಸಂದೀಪ ಪಾಟೀಲ, ಅಮರಸ್ವಾಮಿ ಸ್ಥಾವರಮಠ, ಜಗನ್ನಾಥ ದೇಶಮುಖ, ರಾಜೇಂದ್ರ ಸೇರಿದಂತೆ ವಸತಿ ಶಾಲೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

























