
ಬೀದರ್:ಫೆ.15: ಪ್ರಜಾಪಿತಾ ಬ್ರಹ್ಮಾಕುಮಾರಿಸ್ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮ ವತಿಯಿಂದ 90ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ ಹಾಗೂ ವ್ಯಸನಮುಕ್ತ ಭಾರತ ಅಭಿಯಾನದ ಅಂಗವಾಗಿ ನಗರದ ಸಾಯಿ ಸ್ಕೂಲ್ ಮೈದಾನದಲ್ಲಿ ಆಯೋಜಿಸಲಾದ 2ನೇ ದಿನದ ಕಾರ್ಯಕ್ರಮದಲ್ಲಿ ನವದೆಹಲಿಯ ರಾಷ್ಟ್ರೀಯ ಪ್ರೇರಣಾದಾಯಕ ಪ್ರವಚನಕಾರರಾದ ರಾಜಯೋಗಿ ಬಿ.ಕೆ. ಪಿಯೂಷ್ ಭಾಯಿಜಿ ಅವರು ಮಾತನಾಡಿ ಇಂದಿನ ವೇಗದ ಜೀವನಶೈಲಿಯಲ್ಲಿ ಮಾನವನ ಮನಸ್ಸು ಅತಿಯಾದ ಆಲೋಚನೆಗಳು ಮತ್ತು ಒತ್ತಡಗಳಿಂದ ಅಶಾಂತವಾಗುತ್ತಿದೆ. ಮನಸ್ಸನ್ನು ನಿಯಂತ್ರಿಸುವುದಕ್ಕಿಂತ ಅದನ್ನು ಸುಧಾರಿಸುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು. ದಿನನಿತ್ಯ ಸಾವಿರಾರು ಆಲೋಚನೆಗಳು ಹರಿದಾಡುವುದರಿಂದ ಉದಾಸೀನತೆ, ನಿರಾಶೆ ಹಾಗೂ ಏಕಾಂಗಿ ಭಾವನೆಗಳು ಹೆಚ್ಚುತ್ತಿವೆ. ಬಾಹ್ಯ ಸೌಲಭ್ಯಗಳಿದ್ದರೂ ಆಂತರಿಕ ಶಾಂತಿ ಕೊರತೆಯಾಗುತ್ತಿದೆ ಎಂದು ಹೇಳಿದರು.
ಸಕಾರಾತ್ಮಕ ಚಿಂತನೆ ಮತ್ತು ಪರಮಾತ್ಮ ಸ್ಮರಣೆಯ ಮೂಲಕ ವಿಶ್ವದ ಎಲ್ಲಾ ಆತ್ಮಗಳೊಂದಿಗೆ ಆತ್ಮಿಕ ಸಂಪರ್ಕ ಸಾಧಿಸಿ ಶಾಂತಿ, ಪ್ರೀತಿ ಹಾಗೂ ಶಕ್ತಿಯನ್ನು ಹಂಚಿಕೊಳ್ಳಬಹುದು ಎಂದು ಅವರು ತಿಳಿಸಿದರು. ಭಗವದ್ಗೀತೆಯಲ್ಲಿ ಹೇಳಿರುವ “ಮನಮನಾಭವ” ಸಂದೇಶದಂತೆ ಮನಸ್ಸನ್ನು ಪರಮಾತ್ಮನಲ್ಲಿ ಲೀನಗೊಳಿಸಿದಾಗ ಆತ್ಮಬಲ ಹಾಗೂ ಆಂತರಿಕ ಶಾಂತಿ ದೊರೆಯುತ್ತದೆ. ಏಕಾಂಗಿ ಜೀವನ ದುಃಖದ ಮೂಲವಾದರೆ, ಏಕಾಂತವಾಸ ಮಹತ್ತರ ಸಾಧನೆಯಾಗಿದೆ. ಬ್ರಹ್ಮ ಮುಹೂರ್ತದಲ್ಲಿ ಧ್ಯಾನಾಭ್ಯಾಸ ಮಾಡುವುದರಿಂದ ಮನಸ್ಸು ಶುದ್ಧಗೊಂಡು ಜೀವನದಲ್ಲಿ ಸ್ಪಷ್ಟತೆ ಬರುತ್ತದೆ ಎಂದು ವಿವರಿಸಲಾಯಿತು.
ರಾಜಯೋಗ ಧ್ಯಾನದ ಮೂಲಕ ಕಾಮ, ಕ್ರೋಧ, ಲೋಭ, ಮೋಹ ಮತ್ತು ಅಹಂಕಾರ ಮುಂತಾದ ವಿಕಾರಗಳನ್ನು ಜಯಿಸಿದಾಗ ಮಾತ್ರ ನಿಜವಾದ ಸಂತೋಷ ಮತ್ತು ವಿಶ್ವವಿಜಯ ಸಾಧ್ಯವೆಂದು ತಿಳಿಸಿ, ಸಾರ್ವಜನಿಕರು ದಿನನಿತ್ಯ ಸ್ವಲ್ಪ ಸಮಯವನ್ನು ಏಕಾಂತದಲ್ಲಿ ಕಳೆಯುವ ಮೂಲಕ ಆತ್ಮಶಾಂತಿ ಅನುಭವಿಸಬೇಕೆಂದು ಕರೆ ನೀಡಲಾಯಿತು.
ಕೇಂದ್ರದ ಸಂಚಾಲಕರಾದ ಬಿ.ಕೆ. ಪ್ರತಿಮಾ ಬಹೆನಜಿ ಅವರು ಮಾತನಾಡಿ ಈ ಅಭಿಯಾನದಿಂದ ಅನೇಕ ಕುಟುಂಬಗಳ ಜೀವನದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸುಖ ಪುನಃ ಸ್ಥಾಪನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಟ್ಯಶ್ರೀ ನೃತ್ಯಾಲಯದ ರಾಣಿ ಸತ್ಯಮೂರ್ತಿ ಅವರ ತಂಡದಿಂದ ಶಿವತಾಂಡವ ನೃತ್ಯ ಜರುಗಿತು.
ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ. ಗುರುದೇವಿ ಬಹೆನಜಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ನಗರ ಹಾಗೂ ಸುತ್ತಮುತ್ತಿನ ಹಳ್ಳಿಗಳಿಂದ ಸಾವಿರಾರೂ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.

























