ಸಂಕುಚಿತತೆ ದೂರವಾದಾಗ ವಿಶ್ವ ಮಾನವನಾಗಲು ಸಾಧ್ಯ : ದಾಡಗೆ

ಔರಾದ್ :ಡಿ.14: ಅರಿವಿನ ವಿಸ್ತಾರವಾದಲ್ಲಿ ಮಾತ್ರ ಮನಸ್ಸಿನಲ್ಲಿ ಹುದುಗಿರುವ ಸಂಕುಚಿತತೆ ದೂರಾಗಿ ವಿಶ್ವ ಮಾನವರಾಗಲು ಸಾಧ್ಯ ಎಂದು ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಸುನೀತಾ ದಾಡಗೆ ಅಭಿಪ್ರಾಯಪಟ್ಟರು.

ತಾಲೂಕಿನ ಎಕಲಾರ ಗ್ರಾಮದ ಬಸವ ಮಂಟಪದಲ್ಲಿ ಶನಿವಾರ ನಡೆದ ಮನುಜಮತ ವಿಶ್ವಪಥ ಹಾಗೂ ಮಾಸಿಕ ಬಸವಜ್ಯೋತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಅರಿವಿನ ವಿಸ್ತಾರಕ್ಕೆ ನಮ್ಮ ಮನಸ್ಸನ್ನು ತೆರೆದಿಟ್ಟುಕೊಳ್ಳದ ಹೊರತು ಸಮಾಜದ ಪ್ರಗತಿ ಅಸಾಧ್ಯ. ಸುಂದರ ಸಮಾಜ ನಿರ್ಮಾಣಕ್ಕೆ ಅರಿವಿನ ವಿಸ್ತಾರ ಅನಿವಾರ್ಯವಾಗಿದೆ.

ಬಸವಾದಿ ಶರಣರ ವಚನಗಳಲ್ಲಿನ ಮೌಲ್ಯಗಳೇ ಮುಂದೇ ಕುವೆಂಪುರವರು ಹೊಸ ರೂಪ ನೀಡಿ ಜನಸಾಮಾನ್ಯರ ಮನಪರಿವರ್ತನೆಗೆ ಶ್ರಮಿಸಿದ್ದರು. ಕುವೆಂಪು ಅವರನ್ನು ಕೇವಲ ಕವಿ, ಲೇಖಕ ಎನ್ನದೇ ಒಬ್ಬ ದಾರ್ಶನಿಕನಾಗಿಯೂ ಕಾಣಬಹುದಾಗಿದೆ.

ಕನ್ನಡ ಮರೆತರೆ ಸ್ವತಃ ಮರೆತಂತೆ ಎಂದ ಅವರು, ಬಸವ ತತ್ವ ಮತ್ತು ಕುವೆಂಪು ವಿಚಾರಗಳು ನಮಗೆ ಪರಿಪೂರ್ಣತೆ ಒದಗಿಸಿ, ನಾವೆಲ್ಲ ಒಂದು ಎಂಬ ಭ್ರಾತೃತ್ವ ಭಾವ ಮೂಡಿಸುತ್ತವೆ. ಅಂಕಗಳಿಗೆ ಸೀಮಿತವಾದ ಜ್ಞಾನ ಅಪಾಯಕಾರಿ ಎಂದರು.

ಬಸವ ಗುರುಕುಲ ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಿರ್ಮಲಾ ಶೇರಿ ಮಾತನಾಡಿ, ಶಿಕ್ಷಣದ ಜೊತೆಗೆ ಕನ್ನಡ ಸಾಹಿತ್ಯ ಸಂಸ್ಕøತಿಯ ಸಂಸ್ಕಾರ ದೊರೆತರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು. ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ ಪ್ರಾಸ್ತಾವಿಕ ಮಾತನಾಡಿದರು. ಇದೆ ಸಂದರ್ಭದಲ್ಲಿ ಸಾಯಿಚರಣ ಬಿರಾದಾರ ಮಗುವಿನ ಜನ್ಮದಿನ ನೆರವೇರಿತು.

ಎಕಲಾರ ಗ್ರಾಪಂ ಅಧ್ಯಕ್ಷೆ ಸುನೀತಾ ಮಣಿಗೆಂಪುರೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ವಿಸ್ತರಣಾಧಿಕಾರಿ ಸೂರ್ಯಕಾಂತ ವಲ್ಲಾಪೂರೆ, ಸರ್ಕಾರಿ ನೌಕರ ಸಂಘದ ಕಾರ್ಯದರ್ಶಿ ಸಂಗಮೇಶ ರೆಡ್ಡಿ, ಸತೀಶ ಮಜಗೆ, ಮಲ್ಲಿಕಾರ್ಜುನ ಹಿಪ್ಪಳಗಾವೆ, ಜಗನ್ನಾಥ ಮೂಲಗೆ, ರಾಜಕುಮಾರ ಬಿರಾದಾರ, ಶಿವಾನಂದ ಬಿರಾದಾರ್, ಪ್ರಕಾಶ ಹಿಪ್ಪಳಗಾವೆ, ನಾಗೇಶ ಪಾಟೀಲ್, ಧನರಾಜ ಪಿಟ್ರೆ, ಯುನುಸ್ ಸೇರಿದಂತೆ ಇನ್ನಿತರರಿದ್ದರು.