ಆರ್‍ಎಸ್‍ಎಸ್ ಚಟುವಟಿಕೆ ನಿಷೇಧ ಹೇಳಿಕೆಯಲ್ಲಿ ತಪ್ಪೇನಿದೆ ?

ಕಲಬುರಗಿ,ಅ.15: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು ಸರಕಾರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಘ ಪರಿವಾರದ ಚಟುವಟಿಕೆಗಳು ನಿಷೇಧಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರಲ್ಲಿ ತಪ್ಪೇನಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ ಸದಸ್ಯ ಜಗದೇವ ಗುತ್ತೇದಾರ ಪ್ರಶ್ನಿಸಿದ್ದಾರೆ.
ಆರ್‍ಎಸ್‍ಎಸ್ ಕೈಗೊಂಬೆಯಾಗಿರುವ ಬಿಜೆಪಿ ನಾಯಕರು ಸಚಿವ ಪ್ರಿಯಾಂಕ ಖರ್ಗೆ ಅವರ ಹೇಳಿಕೆಗಳನ್ನು ತಿರುಚಿ ಆರ್‍ಎಸ್‍ಎಸ್ ನಿಷೇಧಕ್ಕೆ ಆಗ್ರಹಿಸಿದ್ದಾರೆಂದು ಸುಳ್ಳು ಸುದ್ದಿಗಳನ್ನು ಹರಡಿಸುತ್ತಾ ಜೊತೆಗೆ ಸಚಿವರ ಮೇಲೆ ವೈಯಕ್ತಿಕ ನಿಂಧನೆಗಳನ್ನು ಮಾಡುತ್ತಿದ್ದಾರೆ. ದೇಶದ ಒಳಿತಿಗಾಗಿ ಇಂತಹ ಕೋಮುವಾದಿ ವಿಷಬೀಜ ಬಿತ್ತುವ ಸಂಘಗಳನ್ನು ನಿಯಂತ್ರಿಸಬೇಕೆಂದು ಸಚಿವ ಪ್ರಿಯಾಂಕ ಖರ್ಗೆ ಮುಂದಾಳತ್ವ ನಡೆಸಿ ಮಾತನಾಡಿದರೆ ಸಚಿವರಿಗೆ ಅಪರಿಚಿತರಿಂದ ದೂರವಾಣಿ ಮೂಲಕ ಜೀವಬೆದರಿಕೆ ಕರೆಗಳು ಬರುತ್ತಿವೆ. ಸರಕಾರ ಸಚಿವರಿಗೆ ಸರಿಯಾದ ಭದ್ರತೆ ಮತ್ತು ಸೂಕ್ತ ರಕ್ಷಣೆ ಒದಗಿಸಬೇಕೆಂದು ಜಗದೇವ ಗುತ್ತೇದಾರ ಆಗ್ರಹಿಸಿದ್ದಾರೆ.
ಈಗಾಗಲೇ ತಮೀಳುನಾಡು ರಾಜ್ಯದಲ್ಲಿ ಅಲ್ಲಿನ ಸರಕಾರ ಆರ್‍ಎಸ್‍ಎಸ್ ಚಟುವಟಿಕೆಗಳಿಗೆ ನಿಷೇಧ ಹೇರಿದೆ. ಅದೇ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ಬರಲಿ ಎಂದು ಅವರು ತಿಳಿಸಿದ್ದಾರೆ.