ಯಾವ ಸಾಧನೆಗೆ ಸಾವಿರ ದಿನ ಸಂಭ್ರಮ

ಬೆಂಗಳೂರು, ಜ. ೧೪- ರಾಜ್ಯದ ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಸಂಭ್ರಮಾಚರಣೆ ಯಾವ ಸಾಧನೆಗೆ ಎಂದು ಪ್ರಶ್ನಿಸಿರುವ ಪ್ರತಿಪಕ್ಷ ಆರ್. ಅಶೋಕ್, ನಿಮ್ಮ ಈ ಸಂಭ್ರಮ ಜನಾಕ್ರೋಶವನ್ನು ಅಣಕಿಸುವ ವಿಕೃತ ಮನಸ್ಸಿನ ಅಟ್ಟಹಾಸದಂತೆ ಕಾಣುತ್ತಿದೆ ಎಂದು ಟೀಕಿಸಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಸಾವಿರ ದಿನಗಳ ಆಡಳಿತದ ಹೆಸರಿನಲ್ಲಿ ಸಂಭ್ರಮಿಸಲು ಹೊರಟಿರುವ ನಿಮಗೆ ರಾಜ್ಯದ ವಾಸ್ತವ ಸ್ಥಿತಿಯ ಅರಿವಿದೆಯೇ ಎಂದು ಪ್ರಶ್ನಿಸಿದ್ದಾರೆ.


ನಿಮ್ಮ ಈ ಸಂಭ್ರಮಾಚರಣೆ ಯಾವ ಸಾಧನೆಗೆ, ಖಜಾನೆ ಮಾಡಿದ ಸಾಧನೆಗಾ, ನೀರು, ಹಾಲು, ಪೆಟ್ರೋಲ್-ಡೀಸೆಲ್, ಬಸ್, ಮೆಟ್ರೋ, ವಿದ್ಯುತ್, ಆಸ್ತಿ ತೆರಿಗೆ ಏರಿಸಿ ಬಡವರು, ಮಧ್ಯಮ ವರ್ಗದವರನ್ನು ಸುಲಿಗೆ ಮಾಡಿದ್ದಕ್ಕೆ ವಿಜಯೋತ್ಸವ ಆಚರಿಸುತ್ತಿದ್ದೀರಾ ಎಂದು ಕಿಡಿಕಾರಿದ್ದಾರೆ.


ನಿಮ್ಮ ಈ ಸಂಭ್ರಮ ಮೂಡಾ ಮತ್ತು ವಾಲ್ಮೀಕಿ ಹಗರಣದ ಖುಷಿಗಾ, ರೈತರ ಸಂಕಷ್ಟಕ್ಕೆ ಸ್ಪಂದಿಸದ ದರ್ಪದ ಧೋರಣೆಗಾ, ಗುತ್ತಿಗೆದಾರರ ಕಮೀಷನ್ ಕಿರುಕಳಕ್ಕಾ, ಹದಗೆಟ್ಟ ಕಾನೂನು ಸುವ್ಯವಸ್ಥೆಗಾ, ಯುವಕರ ಕನಸು ನುಚ್ಚುನೂರು ಮಾಡಿದ್ದಕ್ಕಾ, ಫೆಬ್ರವರಿ-ಮಾರ್ಚ್ ತಿಂಗಳ ಗೃಹ ಲಕ್ಷ್ಮಿ ಹಣ ಕೊಡದೆ ವಂಚನೆ ಮಾಡಿದ್ದಕ್ಕಾ, ತುಷ್ಟೀಕರಣ ರಾಜಕಾರಣವನ್ನು ಪರಾಕಾಷ್ಠೆಗೆ ಕೊಂಡೊಯ್ದಿದ್ದಕ್ಕಾ, ಬ್ರ್ಯಾಂಡ್ ಬೆಂಗಳೂರಿನ ಬವಣೆಗಾ ಎಂದು ಅವರು ಪ್ರಶ್ನಿಸಿದ್ದಾರೆ.


ರಾಜ್ಯದ ಜನತೆ ಸಂಕಷ್ಟದಲ್ಲಿರುವಾಗ ಸಾರ್ವಜನಿಕರ ತೆರಿಗೆ ಹಣದಲ್ಲಿ ಇಂತಹ ವೈಭವದ ಸಮಾವೇಶಗಳನ್ನು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರೇ ತಕ್ಕಪಾಠ ಕಲಿಸುತ್ತಾರೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.