ತೇವಭೂಮಿ ನೀರನ್ನು ಸಂಗ್ರಹಿಸಿ ಭೂಗರ್ಭದ ನೀರಿನ ಮಟ್ಟ ಹೆಚ್ಚಿಸುತ್ತದೆ :ಪುಣ್ಯಶೆಟ್ಟಿ ಬಿ.ಎನ್.

ಕಲಬುರಗಿ:ಫೆ.4:ತೇವಭೂಮಿ ಗುರುತಿಸುವುದು, ಸಂರಕ್ಷಿಸುವುದು, ನಿರ್ವಹಿಸುವುದು ಎಷ್ಟು ಮುಖ್ಯವೋ? ಅಷ್ಟೇ ಆ ಸ್ಥಳದಲ್ಲಿ ಕಟ್ಟಡ ನಿರ್ಮಾಣ, ಕಸ ವಿಲೇವಾರಿ ಮತ್ತು ಹಾನಿಕಾರಿಕ ಚಟುವಟಿಕೆಗಳು ನಿಷೇಧಿಸುವುದು ಅಷ್ಟೇ ಮುಖ್ಯ ಎನ್ನುತ್ತಾ ನಮ್ಮ ಕಲ್ಯಾಣ ಕರ್ನಾಟಕ ಪ್ರದೇಶ ಬಯಲುಭೂಮಿ,ಕೃಷಿಗೆ ಸೂಕ್ತವಾದ ಸ್ಥಳ. ವಿದ್ಯಾವಂತ ಯುವಕರು ತಮ್ಮ ಉದ್ಯೋಗದೊಂದಿಗೆ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕೆಂದು ನಿವೃತ್ತ ಎ.ಡಿ.ಎ. ಕೃಷಿ ಅಧಿಕಾರಿಬಿ.ಎನ್. ಪುಣ್ಯಶೆಟ್ಟಿ ಮಾತನಾಡಿದರು.
ಫೆಬ್ರುವರಿ 2 ರಂದು ಬರುಕಾ ಆಸ್ಪತ್ರೆಹತ್ತಿರವಿರುವ ಶ್ರೀ ಶಿವಶರಣ ನಗರದಲ್ಲಿ ಟೆಂಗಳಿ ಅಂಡಗಿ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡ ‘ವಿಶ್ವ ತೇವಭೂಮಿ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿದ ಪುಣ್ಯಶೆಟ್ಟಿರವರು ಕೃಷಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ನಿವೃತ್ತ ಬೀಜ ಸಂಸ್ಕರಣಾ ನಿಗಮದ ಕೃಷಿ ಅಧಿಕಾರಿಗಳಾದ ಶಿವಶರಣಪ್ಪ ಬುಳ್ಳಾರವರು ಮಾತನಾಡುತ್ತ ಪ್ರತಿ ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿ ಸರ್ಕಾರದಿಂದ ಸಂಸ್ಕರಣವಾದ ಬೀಜ ಬಿತ್ತಿ, ನಿಗಮದಿಂದ ಸಿಗುವ ಸೌಲಭ್ಯಗಳು ರೈತರು ಉಪಯೋಗಿಸಿಕೊಳ್ಳಬೇಕೆಂದು ತಮ್ಮ ಅನುಭವ ಹಂಚಿಕೊಂಡರು.
ನಿವೃತ್ತ ಕೃಷಿ ಅಧಿಕಾರಿ 80ನೇ ಹುಟ್ಟುಹಬ್ಬ ವೈಯಕ್ತಿಕ ಕಾರ್ಯಕ್ರಮ ಆದರೂ ಇದಕ್ಕೆ ಸಾಮಾಜಿಕ ರೂಪಕೊಟ್ಟು ಇದರಿಂದ ರೈತರಿಗೆ ಒಳ್ಳೆಯ ಮಾಹಿತಿ ನೀಡುವಂತಹ ಈ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾದದ್ದು ಎಂದು ಕಾರ್ಯಕ್ರಮದ ಸಾನಿಧ್ಯ ವಹಿಸಿದ ಶ್ರೀ ವಿವೇಕ ಸಿದ್ದ ಸೇವಾಶ್ರಮದ ಶ್ರೀ ದಯಾಶಂಕರ ಸ್ವಾಮೀಜಿ ಆಶೀರ್ವಚನ ನೀಡಿದರು.
ಪ್ರಾರಂಭದಲ್ಲಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ ರವರು ಸರ್ಕಾರದ ಅನೇಕ ಉಚಿತ ಯೋಜನೆಗಳಿಂದ ರೈತರ ದುಡಿಮೆ ಕಡಿಮೆಯಾಗಿದ್ದು, ಲೇಬರ್ ಹೆಚ್ಚಾಗಿದ್ದು, ಇಂದು ಫೆಬ್ರುವರಿ 2ರಂದು ‘ವಿಶ್ವ ತೇವಭೂಮಿ ದಿನಾಚರಣೆ’ ನಿಮಿತ್ಯ ಇಬ್ಬರು ನಿವೃತ್ತ ಕೃಷಿ ಅಧಿಕಾರಿಗಳ ಅನುಭವ ಮತ್ತು ಸಲಹೆ ಪಡೆಯುವ ಉದ್ದೇಶದಿಂದಲೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ನಿಂಗಣ್ಣ ಪೂಜಾರಿ, ಚನ್ನಬಸಪ್ಪ ಹಾಬಾಳ, ಜಗನ್ನಾಥ ಗೋಟೂರ ಉಪಸ್ಥಿತರಿದ್ದರು.
ವಿನಾಯಕ ಬುಳ್ಳಾ ಸ್ವಾಗತಿಸಿದರು. ವಿವೇಕಾನಂದ ಬುಳ್ಳಾ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಶರಣಪ್ಪ ಪೂಜಾರಿ, ಎಸ್.ವಿ. ರಸ್ತಂಪೂರ, ಚಂದ್ರಶೇಖರ ಪೂಜಾರಿ, ದಿನೇಶ ದೊಡ್ಡಮನಿ, ಪ್ರಶಾಂತ ನಂದಿಕೂರ, ಮಲ್ಲಮ್ಮ, ಮಹಾದೇವಿ, ವಿಜಯಲಕ್ಷ್ಮಿ, ವಿದ್ಯಾಶ್ರೀ, ಜಗದೇವಿ ಹಾಗೂ ಇತರರು ಉಪಸ್ಥಿತರಿದ್ದರು.