ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕೈ ಜೋಡಿಸಬೇಕು

ಕೋಲಾರ,ಆ,೧೬- ಸರಕಾರಿ ಶಾಲೆಗಳ ಬಲವರ್ಧನೆಗೆ ಸಮಾಜವು ಕೈಜೋಡಿಸಬೇಕೆಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕ ರವಿಚಂದ್ರ ಕರೆ ನೀಡಿದರು.


ತಾಲೂಕಿನ ಕೂಟೇರಿ ಸರಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೭೯ ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣೆ ನೆರವೇರಿಸಿ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಶೂಗಳನ್ನು ಕೊಡುಗೆಯಾಗಿ ವಿತರಿಸಿ ಅವರು ಮಾತನಾಡಿದರು.


ಶಾಲಾಭಿವೃದ್ಧಿ ಸಮಿತಿಯ ವೆಂಕಟಸ್ವಾಮಿ ಕೋರಿಕೆ ಮೇರೆಗೆ ಶಾಲೆಯ ೩೦ ಮಂದಿ ಮಕ್ಕಳಿಗೆಲ್ಲರಿಗೂ ತಮ್ಮ ಸ್ವಂತ ಹಣದಿಂದಲೇ ಸಮವಸ್ತ್ರ ಹಾಗೂ ಶೂಗಳನ್ನು ಕೊಡಿಸಿದ್ದು, ಶಾಲೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಇತರೇ ದಾನಿಗಳಿಂದಲೂ ಕೊಡಿಸಲು ಶ್ರಮಿಸುವುದಾಗಿ ಅವರು ಹೇಳಿದರು.


ಸರಕಾರಿ ಶಾಲೆಗಳಲ್ಲಿ ಮಕ್ಕಳು ಮುಕ್ತವಾಗಿ ಬೆಳವಣಿಗೆಯಾಗಲು ಅವಕಾಶವಿದೆ, ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ, ಪೋಷಕರು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಮೂಲಕ ಹಾಗೂ ಶಾಲೆಗಳ ಅಭಿವೃದ್ಧಿಗೆ ನೆರವಾಗುವ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕೆಂದು ಸಲಹೆ ನೀಡಿದರು.


ಹಲವಾರು ಮಂದಿಯ ತ್ಯಾಗ ಬಲಿದಾನಗಳಿಂದ ಬಂದಿರುವ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ದೇಶದ ಹೆಮ್ಮೆಯ ಪ್ರಜೆಯಾಗುವ ಗುರಿಯನ್ನು ವಿದ್ಯಾರ್ಥಿಗಳು ಇಟ್ಟುಕೊಳ್ಳ ಬೇಕೆಂದು ಕಿವಿ ಮಾತು ಹೇಳಿದರು.


ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, ಗ್ರಾಮಸ್ಥರು ಹಾಗೂ ಹಿರಿಯರನ್ನು ಶಾಲೆಗೆ ನೆರವಾಗುವಂತೆ ಮಾಡಿಕೊಂಡ ಮನವಿಗೆ ಅಕಾರಿಗಳು ಸೇರಿದಂತೆ ವಿವಿಧ ಮುಖಂಡರು ಸ್ಪಂದಿಸಿ ಸ್ವಾತಂತ್ರ್ಯೋತ್ಸವದ ಕೊಡುಗೆಯಾಗಿ ಅನೇಕ ಸವಲತ್ತುಗಳನ್ನು ಶಾಲೆಗೆ ನೀಡುತ್ತಿರುವುದು ಶ್ಲಾಘನೀಯ, ಸರಕಾರಿ ಶಾಲೆಯ ಮೇಲೆ ಇದೇ ರೀತಿಯ ಪ್ರೀತಿ ಇರಲಿ ಎಂದರು.


ಇದೇ ಸಂದರ್ಭದಲ್ಲಿ ದಾನಿಗಳಿಂದ ಮಕ್ಕಳಿಗೆ ಸಮವಸ್ತ್ರ, ಶೂ ಅಲ್ಲದೆ ಶಾಲೆಗೆ ಅಗತ್ಯವಿರುವ ಕುಕ್ಕರ್ ಪಾಠೋಪಕರಣ, ಪೀಠೋಪಕರಣ ಇತ್ಯಾದಿ ಕೊಡುಗೆಗಳನ್ನು ಸ್ಪೀಕರಿಸಲಾಯಿತು.