
ಸಂಜೆವಾಣಿ ವಾರ್ತೆ,
ವಿಜಯಪುರ, ಆ. ೨೦: ಬಬಲೇಶ್ವರ ತಾಲೂಕಿನಲ್ಲಿ ಮುಳವಾಡ ಏತನೀರಾವರಿ ಯೋಜನೆಯಡಿ ಬರುವ ಮಲಘಾಣ ಪಶ್ಚಿಮ ಕಾಲುವೆಯಲ್ಲಿ ರಂಧ್ರ ಕೊರೆದು (ಸೈಫನ್ ಹೊಡೆದು) ಅಕ್ರಮವಾಗಿ ನೀರು ಪಡೆಯುತ್ತಿದ್ದ ೩೦ ಪ್ರಕರಣಗಳನ್ನು ಕೆಬಿಜೆಎ???ಲ್ ಅಧಿಕಾರಿಗಳು ಪತ್ತೆಹಚ್ಚಿದ್ದು,
ಅಕ್ರಮ ನೀರು ಬಳಕೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ.
ಮಲಘಾಣ ಪಶ್ಚಿಮ ಕಾಲುವೆ ಒಟ್ಟು ೧೧೮.೬೦ ಕಿ.ಮೀ. ಉದ್ದವಿದ್ದು, ಸುಮಾರು ೧೦೦ ಕಿ.ಮೀ.ವರೆಗೆ ಮಾತ್ರ ನೀರು ಹರಿಯುತ್ತಿತ್ತು. ೧೦೦ರಿಂದ ೧೧೮.೬೦ ಕಿ.ಮೀ.ವರೆಗಿನ ಕೊನೆಯ ಭಾಗಕ್ಕೆ ನೀರು ತಲುಪದ ಹಿನ್ನೆಲೆಯಲ್ಲಿ ಆ ಭಾಗದ ರೈತರು ಹಲವು ದಿನಗಳಿಂದ ಅಳಲು ತೋಡಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಕೆಬಿಜೆಎ???ಲ್ ಅಧಿಕಾರಿಗಳು ಕಾಲುವೆ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಿದಾಗ ಬಬಲೇಶ್ವರ ತಾಲೂಕಿನ ಯಕ್ಕುಂಡಿ, ಹೊಕ್ಕುಂಡಿ, ಅರ್ಜುಣಗಿ ಹಾಗೂ ಹೆಬ್ಬಾಳಟ್ಟಿ ವ್ಯಾಪ್ತಿಯಲ್ಲಿ ಸುಮಾರು ೩೦ ಕಡೆಗಳಲ್ಲಿ ಕಾಲುವೆಯ ಬುಡದಲ್ಲಿ ಯಾರ ಕಣ್ಣಿಗೂ ಕಾಣದಂತೆ ರಂಧ್ರ ಕೊರೆದು ೪ರಿಂದ ೬ ಇಂಚಿನ ಪೈಪುಗಳನ್ನು ಅಳವಡಿಸಿ ಅಕ್ರಮವಾಗಿ ನೀರು ಪಡೆಯುತ್ತಿರುವುದು ಪತ್ತೆಯಾಗಿದೆ.
ಇತ್ತೀಚೆಗೆ ಕಾಲುವೆಯ ಕೊನೆಯ ಭಾಗದವರೆಗೂ ನೀರು ಹರಿಸುವಂತೆ ಆಗ್ರಹಿಸಿ ರೈತರು ಅರ್ಜುಣಗಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಈ ಧರಣಿಯಲ್ಲಿ ಪಾಲ್ಗೊಂಡ ಕೆಲವರೇ ಇದೇ ಕಾಲುವೆಯಲ್ಲಿ ಸೈಫನ್ ಹೊಡೆದು ನೀರು ಕಳ್ಳತನ ಮಾಡಿರುವುದು ಅಧಿಕಾರಿಗಳ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ಫೆಬ್ರುವರಿಯಲ್ಲಿ ಕಾಲುವೆಗಳ ನಿರ್ವಹಣೆ ಕೈಗೊಂಡ ಸಂದರ್ಭದಲ್ಲಿ ಇಂತಹ ಸೈಫನ್‌ಗಳಿಗೆ ಕಾಂಕ್ರಿಟ್ ಹಾಕಿ ರಂಧ್ರಗಳನ್ನು ಮುಚ್ಚಲಾಗಿತ್ತು. ಆದರೆ, ಇತ್ತೀಚೆಗೆ ಕಾಲುವೆಗೆ ನೀರು ಹರಿಸಿದ ಬಳಿಕ ನೀರು ಕಳ್ಳರು ಮತ್ತೆ ಕಾಂಕ್ರಿಟ್ ಒಡೆದು ರಂಧ್ರ ಕೊರೆದು ಅಕ್ರಮವಾಗಿ ನೀರು ಪಡೆಯುತ್ತಿರುವುದು ಪತ್ತೆಯಾಗಿದೆ.
ಕಾಲುವೆಯ ಕೊನೆಯ ಹಂತದ ರೈತರಿಗೆ ನೀರು ತಲುಪದಿರುವುದಕ್ಕೆ ಅಕ್ರಮ ನೀರು ಪಡೆಯುವ ಪ್ರಕರಣಗಳೂ ಪ್ರಮುಖ ಕಾರಣವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮವಾಗಿ ನೀರು ಕಳ್ಳತನ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೆಬಿಜೆಎನ್‌ಲ್ ಬಬಲೇಶ್ವರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಂದ್ರ ವೈ. ರೂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.































