
ಕೋಲಾರ,ಅ,೬-ಸತತ ಎರಡು ದಿನದಿಂದ ಸುರಿದ ಮಳೆಯಿಂದ ಬೇತಮಂಗಲ ಸಮೀಪದ ಗೋಸಿನಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಕೋಡಿ ನೀರು ಸಮರ್ಪಕವಾಗಿ ಹರಿಯಲು ಕಾಲುವೆ ಇಲ್ಲದೆ ರಸ್ತೆ ಮೇಲೆ ಅರಿಯುತ್ತಿರುವುದಕ್ಕೆ ವಾಹನ ಸವಾರರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇತಮಂಗಲದಿಂದ ಕ್ಯಾಸಂಬಳ್ಳಿಗೆ ಸಂಪರ್ಕ ಕಲ್ಪಿಸುವ ಮಾರ್ಗದ ಬ್ಯಾಟರಾಯನಹಳ್ಳಿ ಬಳಿ ಹಾದು ಹೋಗಿರುವ ಕಾರಿಡಾರ್ ರಸ್ತೆಯ ಸೇತುವೆ ಬಳ್ಳಿ ಸಮರ್ಪಕವಾಗಿ ರಾಜಕಾಲುವೆ ಹಾಗೂ ಚರಂಡಿ ಇಲ್ಲದೆ ರಸ್ತೆಯ ಮೇಲೆ ನೀರು ಹರಿದು ರೈತರ ತೋಟಗಳಿಗೆ ನುಗ್ಗಿದೆ.
ಇದೇ ರಸ್ತೆಯಲ್ಲಿ ಪ್ರತಿನಿತ್ಯ ಶಾಲಾ ವಿದ್ಯಾರ್ಥಿಗಳು ರೈತರು ಹಾಗೂ ಸಾರ್ವಜನಿಕರು ಸೇರಿದಂತೆ ನಿತ್ಯ ನೂರಾರು ಮಂದಿ ಪ್ರಯಾಣ ಮಾಡುತ್ತಾರೆ, ಆದರೆ ಎರಡು ದಿನ ಸುರಿದ ಮಳೆಗೆ ರಸ್ತೆಯ ಮೇಲೆ ನೀರು ಹರಿದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮತ್ತಷ್ಟು ಮಳೆ ಸುರಿದರೆ ನೀರಿನ ಮಟ್ಟ ಏರಿಕೆಯಾಗಿ ವಾಹನ ಸಂಚಾರ ಬಹುತೇಕ ಕಡಿತವಾಗುವ ಸಾಧ್ಯತೆ ಇದೆ ಈಗಾಗಲೇ ರಸ್ತೆಯು ಸಹ ಬಹುತೇಕ ಕೊಚ್ಚು ವಾಗಿರುವುದರಿಂದ ಹಾಳಾಗಿದ್ದು ಮುಂದಿನ ದಿನಗಳಲ್ಲಿ ಯಾವ ಅನಾಹುತ ಸಂಭವಿಸಲಿದೆ ಎಂದು ಆತಂಕ ಪಡುತ್ತಿದ್ದಾರೆ.
ರಾಜ ಕಾಲುವೆ ಸಂಪೂರ್ಣ ಒತ್ತುವರಿ:
ಬೇತಮಂಗಲ ಗೋಸಿನಕರೆ ಕೋಡಿ ಅರಿಯುವ ನೀರಿನ ಕಾಲುವೆಯನ್ನು ಸಂಪೂರ್ಣವಾಗಿ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವುದರಿಂದ ನೀರು ಸಮರ್ಪಕವಾಗಿ ಕರೆಯದೆ ರೈತರ ಹೊಲಗದ್ದೆಗಳಿಗೆ ಹಾಗೂ ರಸ್ತೆಯ ಮೇಲೆ ಹರಿಯುತ್ತಿರುವುದು ಕಾಣಬಹುದು.
ಸಾವಿರಾರು ಮಂದಿಯೊಂದಿಗೆ ಹೋರಾಟ ಎಚ್ಚರಿಕೆ:
ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಮಟ್ಟದ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಸ್ಥಳಕ್ಕೆ ಭೇಟಿ ನೀಡಿ ನೀರು ಸರಾಗವಾಗಿ ಅರಿಯಲು ವ್ಯವಸ್ಥೆ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅನುವು ಮಾಡಿಕೊಡಬೇಕು ಇಲ್ಲದಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಈ ಭಾಗದ ರೈತರು ಹಾಗೂ ಸಾರ್ವಜನಿಕರಿಂದ ಪ್ರತಿಭಟನೆ ಮಾಡಲಾಗುವುದು ಎಂದು ದಲಿತ ಸಂಘಟನೆಯ ಮುಖಂಡ ಕೆ.ಬಿ ದೇವರಾಜ್ ಎಚ್ಚರಿಕೆ ನೀಡಿದರು.
































