
ಕಲಬುರಗಿ:ಹೆಣ್ಣಿಗೆ ಮನೆಯ ಒಳಗೆ ಮಾತ್ರವಲ್ಲದೇ, ಬಾಹ್ಯ ಜಗತ್ತಿನಲ್ಲಿಯೂ ಸುರಕ್ಷತೆ, ಸ್ವಾತಂತ್ರ್ಯ ಹಾಗೂ ಗೌರವದ ಅಗತ್ಯವಿದೆ ಎಂದು ಸಿದ್ದಪ್ಪ ಭಗವತಿ ಅಭಿಪ್ರಾಯಪಟ್ಟರು.
ಭಾವಭೂಮಿ ಅಭಿನಯ ಶಾಲೆ, ಕುಂದಾಪುರ ವತಿಯಿಂದ ನಗರದ ವಿವೇಕಾನಂದ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳಿಗಾಗಿ ವಿಶೇಷ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯದ ಕೊರತೆಯಿತ್ತು. ಅವರ ಶಿಕ್ಷಣದ ಆಸೆ, ಕನಸುಗಳು ಹಾಗೂ ಆಕಾಂಕ್ಷೆಗಳು ಮನೆಯ ಬಂಧನದಲ್ಲಿಯೇ ಸೀಮಿತವಾಗುತ್ತಿದ್ದವು. ಇಂದಿಗೂ ಸಹ, ಸಮಾಜ ಮತ್ತು ಕುಟುಂಬದವರು, ಕಾಳಜಿಯ ಹೆಸರಿನಲ್ಲಿ ಹೆಣ್ಣು ಮಕ್ಕಳ ಆಸೆ-ಆಕಾಂಕ್ಷೆಗಳಿಗೆ ಕಡಿವಾಣ ಹಾಕುತ್ತಿರುವುದು ವಿಷಾದನೀಯ. ತಂದೆ-ತಾಯಿಯ ಪ್ರೀತಿ ಮತ್ತು ಕಾಳಜಿಯಿಂದ ಒದಗಿಸುವ ರಕ್ಷಣೆಯೇ ಕೆಲವೊಮ್ಮೆ ಹೆಣ್ಣು ಮಕ್ಕಳಿಗೆ ಬಂಧನದ ಅನುಭವವನ್ನು ಉಂಟುಮಾಡುತ್ತಿದೆ. ಸ್ತ್ರೀಯರು ಅನುಭವಿಸುವ ನೋವು, ಸಂಕಷ್ಟಗಳು ಹಾಗೂ ಸ್ವಾತಂತ್ರ್ಯದ ಹಂಬಲವನ್ನು ನಾಟಕದ ಮೂಲಕ ಸಮಾಜದ ಮುಂದೆ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಭೂಮಿಕಾ ರಾವ್ ಅವರು ಏಕಪಾತ್ರಾಭಿನಯದ ಮೂಲಕ ವಿದ್ಯಾರ್ಥಿಗಳನ್ನು ಮನಸೂರೆಗೊಳಿಸಿದರು.ಈ ಸಂದರ್ಭದಲ್ಲಿ ನಾಟಕದ ನಿರ್ದೇಶಕ ನಾಗೇಶ್ ಕುಂದಾಪುರ, ಸಂಸ್ಥೆಯ ಅಧ್ಯಕ್ಷೆ ಸುವರ್ಣ ಭಗವತಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





















