Home ಜಿಲ್ಲೆ ಕಲಬುರಗಿ ಮಾ. 27ರಂದು ಸಂಪೂರ್ಣ ಒಳಮೀಸಲಾತಿ ಜಾರಿ ಮಾಡದಿದ್ದರೆ ಸರಕಾರದ ವಿರುದ್ಧ ಹೋರಾಟ ಎಚ್ಚರಿಕೆ

ಮಾ. 27ರಂದು ಸಂಪೂರ್ಣ ಒಳಮೀಸಲಾತಿ ಜಾರಿ ಮಾಡದಿದ್ದರೆ ಸರಕಾರದ ವಿರುದ್ಧ ಹೋರಾಟ ಎಚ್ಚರಿಕೆ

ಕಲಬುರಗಿ:ಮಾ.25: ಒಳಮೀಸಲಾತಿ ವಿಧೇಯಕವು ರಾಜ್ಯಪಾಲರ ಸಹಿ ಪಡೆದು ಅನುಮೋದನೆಗೊಂಡಿದೆ ಎಂದ ಸಂತೋಷಪಡುವ ಸಂದರ್ಭದಲ್ಲಿ ಒಳಮೀಸಲಾತಿ ಅನ್ವಯವಾಗದಂತೆ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂಬ ಫೆಬ್ರವರಿ 26ರ ಸಚಿವ ಸಂಪುಟದ ತೀರ್ಮಾನ ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ಬಗೆದ ಘೋರ ಅನ್ಯಾಯವಾಗಿದೆ. ಆ ಮೂಲಕ 35 ವರ್ಷಗಳ ಒಳಮೀಸಲಾತಿ ಹೋರಾಟಕ್ಕೆ ಮಹಾದ್ರೋಹ ಎಸಗಲಾಗಿದೆ. ಸರಕಾರದ ಈ ತೀರ್ಮಾನವನ್ನು ಶೋಷಿತ ಜನಜಾಗೃತಿ ವೇದಿಕೆಯ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಜವಳಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ಸರಕಾರ ಮೊದಲನೇ ಅಧಿವೇಶನದಲ್ಲಿಯೇ ಒಳ ಮೀಸಲಾತಿಯನ್ನು ನಮ್ಮ ಸರಕಾರ ಜಾರಿಗೊಳಿಸುತ್ತದೆ ಎಂದು ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಸರಕಾರ ಘೋಷಿಸಿತು.ಚಿತ್ರದರ್ಗ ಸಮಾವೇಶದಲ್ಲಿಯೂ ಅದೇ ಭರವಸೆ ನೀಡಲಾಗಿತ್ತು. ಸರಕಾರ ಬಂದು 2 ವರ್ಷ ಪೂರ್ಣವಾದರು ಸಂಪೂರ್ಣ ಒಳಮೀಸಲಾತಿಯನ್ನು ಜಾರಿಗೊಳಿಸುವ ಪ್ರಮಾಣಿಕ ಪ್ರಯುತ್ನ ನಡೆಸಲಿಲ್ಲ.
ಸದಾ ಸಂವಿಧಾನ, ಬಾಬಾ ಸಾಹೇಬರೆಂದು ಬಾಯಿ ಬಡೆದುಕೊಳ್ಳುವ ಈ ಸರಕಾರ ನೀತಿಯಲ್ಲಿ ಮಾತ್ರ ಸಾಮಾಜಿಕ ನ್ಯಾಯಕ್ಕೆ ವಿರೋಧವಾಗಿ ನಡೆದುಕೊಂಡಿದೆ. ಸುಪ್ರೀಂಕೋರ್ಟಿನ ತೀರ್ಪಿನಂತೆ ಒಳ ಮೀಸಲಾತಿ ಜಾರಿಗೊಳಿಸಬೇಕಾದ ಸಮಾಜ ಕಲ್ಯಾಣ ಸಚಿವರೇ ಒಳ ಮೀಸಲಾತಿ ಜಾರಿಗೆ ಅಡ್ಡಲಾಗಿ ನಿಂತಿದ್ದಾರೆ. ಎಲ್ಲಾ ಪರಿಶಿಷ್ಟರಿಗೆ ಸಾಮಾಜಿಕ ನ್ಯಾಯ ಒದಗಿಸುವ ಬದಲು ಸದಾ ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಾ ಬಂದಿದ್ದಾರೆ.
ಈ ಸರಕಾರದ ವಿಳಂಭ ನೀತಿಯನ್ನು ಸಹಿಸಲಾರೆವು ಮಾರ್ಚ 27ರಂದು ಸಂಪೂರ್ಣವಾದ ಒಳ ಮೀಸಲಾತಿಯನ್ನು ಜಾರಿಗೊಳಿಸದಿದ್ದರೆ ಕಲಬುರಗಿ ಜಿಲ್ಲಾಧಿಕಾರಿಗಳ ಕಛೇರಿ ಎದುರುಗಡೆ ಉಗ್ರವಾದ ಹೋರಾಟದ ಮೂಲಕ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಹೋರಾಟದಲ್ಲಿ ಮಾದಿಗ ಸಮುದಾಯದ ಹೋರಾಟಗಾರರ ಪ್ರಾಣಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆಯಾದರೆ ಹಾಗೂ ಸರಕಾರ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾದರೆ ಇದಕ್ಕೆ ಸರಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.