ಎಚ್ಚರಿಕೆ ನೀಡಿದ್ದ ಪತ್ರ

ಬೆಂಗಳೂರು, ಜೂ.೮-ಆರ್‌ಸಿಬಿಯ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಯಾರು ಹೊಣೆ ಎಂಬ
ವಿಚಾರ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿರುವಾಗಲೇ ವಿಧಾನಸೌಧದ ಭದ್ರತಾ ಉಸ್ತುವಾರಿ ನೋಡಿಕೊಳ್ಳುವ ಉಪ ಪೊಲೀಸ್ ಕಮಿಷನರ್ ಅವರು ಆರ್‌ಸಿಬಿ ವಿಜಯೋತ್ಸವ ಸಮಾರಂಭವನ್ನು ವಿಧಾನಸೌಧದ ಮುಂದೆ ಆಯೋಜಿಸಿದರೆ ಭದ್ರತಾ ವ್ಯವಸ್ಥೆ ಕಷ್ಟವಾಗುತ್ತದೆ ಎಂದು ಡಿಪಿಎಆರ್‌ಗೆ ಪತ್ರ ಬರೆದು ಎಚ್ಚರಿಸಿದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.


ಆರ್‌ಸಿಬಿ ವಿಜಯೋತ್ಸವಕ್ಕೆ ವಿಧಾನಸೌಧಕ್ಕೆ ಸಾವಿರಾರು ಕ್ರೀಡಾಭಿಮಾನಿಗಳು ಬರುವ ಸಾಧ್ಯತೆ ಇದೆ. ಭದ್ರತಾ ಸಿಬ್ಬಂದಿ ಕೊರತೆಯಿಂದ ಬಂದೋಬಸ್ತ್ ವ್ಯವಸ್ಥೆ ಮಾಡುವುದು ಸಮಸ್ಯೆಯಾಗುತ್ತದೆ. ಸ್ವಲ್ಪ ಕಾಲಾವಕಾಶ ನೀಡಿದರೆ ಭದ್ರತೆಯನ್ನು ಮಾಡಿಕೊಂಡು ವಿಜಯೋತ್ಸವ ಆಚರಿಸುವುದು ಸೂಕ್ತ ಎಂಬ ಅರ್ಥದಲ್ಲಿ ವಿಧಾನಸೌಧದ ಡಿಸಿಪಿ ಕರಿಬಸವನಗೌಡ ಅವರು ಡಿಪಿಎಆರ್ ಕಾರ್ಯದರ್ಶಿ ಸತ್ಯವತಿಯವರಿಗೆ ಪತ್ರ ಬರೆದಿದ್ದರಾದರೂ ಈ ಪತ್ರವನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಲಾಗಿದೆ.


ವಿಧಾನಸೌಧದ ಭದ್ರತಾ ಉಸ್ತುವಾರಿ ಹೊತ್ತಿರುವ ಡಿಸಿಪಿಯವರೇ ಈ ರೀತಿ ಪತ್ರ ಬರೆದಿದ್ದರು. ಅದನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆ ಡಿಪಿಎಆರ್ ನಿರ್ಲಕ್ಷ್ಯ ವಹಿಸಿದೆ ಎಂಬ ಅಂಶವು ಚರ್ಚೆಗೆ ಗ್ರಾಸವಾಗಿದೆ.


ಕಾಲ್ತುಳಿತ ದುರಂತಕ್ಕೆ ಕಾರ್ಯಕ್ರಮ ಆಯೋಜನೆ ಮಾಡಿದ್ದ ಕೆಎಸ್‌ಸಿಎ ಹೊಣೆ ಎಂದು ಸರ್ಕಾರ ಹೇಳುತ್ತಿದ್ದರೆ. ಸನ್ಮಾನದ ಪ್ರಸ್ತಾಪ ಮಾಡಿದ್ದೇ ಸರ್ಕಾರ. ಅವರದ್ದೇ ಲೋಪವಾಗಿದೆ ಎಂದು ಕೆಎಸ್‌ಸಿಎ ವಾದ ಮಾಡುತ್ತಿದೆ.


ಈ ಮಧ್ಯೆ ಭದ್ರತಾ ವಿಭಾಗದ ಡಿಸಿಪಿ ಅವರು ಜೂ. ೪ ರಂದೆ ಅಪಾಯದ ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷಿಸಿದ್ದು ಎದ್ದು ಕಾಣುತ್ತಿದೆ. ಆರ್‌ಸಿಬಿ ತಂಡದ ಐಪಿಎಲ್ ಗೆಲುವಿನ ಸಂಭ್ರಮಾಚರಣೆಯಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತದಿಂದ ೧೧ ಜನರು ಸಾವನ್ನಪ್ಪಿದ ಮೂರು ದಿನಗಳ ನಂತರ, ಹಿರಿಯ ಪೊಲೀಸ್ ಅಧಿಕಾರಿ ಎಂಎನ್ ಕರಿಬಸವನ ಗೌಡ ಕಾರ್ಯಕ್ರಮಕ್ಕೆ ಸ್ವಲ್ಪ ಮೊದಲು ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದ್ದರು ಎಂದು ತಿಳಿದುಬಂದಿದೆ.


ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಜಿ. ಸತ್ಯವತಿ ಅವರಿಗೆ ಪತ್ರ ಬರೆದಿದ್ದ ವಿಷಯ ಬೆಳಕಿಗೆ ಬಂದಿದೆ. ಜೊತೆಗೆ ಸ್ಥಳದಲ್ಲಿ ಸೂಕ್ಷ್ಮ ಸ್ಥಿತಿ ಮತ್ತು ಸಾಕಷ್ಟು ಸಿಸಿಟಿವಿ ವ್ಯಾಪ್ತಿಯ ಕೊರತೆಯ ವಿಷಯವನ್ನು ಉಲ್ಲೇಖಿಸಿದ್ದಾರೆ.


ಜನಸಂದಣಿ ಹೆಚ್ಚಾಗುವ ಕೆಲವು ಗಂಟೆಗಳ ಮೊದಲು, ವಿಧಾನಸೌಧದ ಮೆಟ್ಟಿಲುಗಳ ಬಳಿ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಜಿ. ಸತ್ಯವತಿ, ಅಭಿಮಾನಿಗಳು ಕ್ರೀಡಾಂಗಣಕ್ಕೆ ಹೋಗುವಂತೆ ಸಾರ್ವಜನಿಕವಾಗಿ ಒತ್ತಾಯಿಸಿದ್ದರು ಎಟಿಜಿಟಿಲಾಗಿದೆ.


ಎಚ್ಚರಿಕೆಯ ಹೊರತಾಗಿಯೂ, ಆರ್‌ಸಿಬಿಯ ಐಪಿಎಲ್ ವಿಜಯೋತ್ಸವವನ್ನು – ಅಂತಿಮ ಪಂದ್ಯದ ೨೪ ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸರಿಯಾದ ಜನಸಂದಣಿ ನಿಯಂತ್ರಣ ಅಥವಾ ಸುರಕ್ಷತಾ ಶಿಷ್ಟಾಚಾರಗಳಿಲ್ಲದೆ ತರಾತುರಿಯಲ್ಲಿ ನಡೆಸಲಾಯಿತು ಎಂದು ಆರೋಪಿಸಲಾಗಿದೆ.


ಡಿಸಿಪಿಯವರ ಟಿಪ್ಪಣಿಯನ್ನು ಆಗಿನ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ ಅವರೊಂದಿಗೂ ಹಂಚಿಕೊಳ್ಳಲಾಗಿದ್ದು, ಅವರು ಅದನ್ನು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ ಆರ್‌ಸಿಬಿ ಗೆಲ್ಲುವ ಮೊದಲೇ ಆಚರಣೆಗಳು “ಪೂರ್ವ ಯೋಜಿತ”ವಾಗಿದ್ದವು ಎಂದು ಆರೋಪಿಸಿದ್ದಾರೆ. “ಜೂನ್ ೪ ರ ಕಾರ್ಯಕ್ರಮಕ್ಕೆ ಜೂನ್ ೩ ರಂದು ಸಂಜೆ ೬ ಗಂಟೆಗೆ ಫೈನಲ್ ಆರಂಭವಾಗುವ ೯೦ ನಿಮಿಷಗಳ ಮೊದಲು ಅನುಮತಿ ಪಡೆಯಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಆರ್ ಸಿಬಿ ಪಂದ್ಯ ಗೆಲ್ಲುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕನಸು ಕಂಡಿದ್ದರಾ ಎಂದು ಪ್ರಶ್ನಿಸಿದ್ದಾರೆ.


ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿ ದುರಂತದ ರಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೈಗೆ ಮೆತ್ತಿಕೊಂಡಿದ್ದು ಅದನ್ನು ಪೊಲೀಸರ ಕೈಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.