
ಕೋಲಾರ,ಮೇ,೨೧- ಅಧಿಕಾರಿಗಳ, ಜನಪ್ರತಿನಿಧಿಗಳ ಬೇಜವಾದ್ದಾರಿ, ನಿರ್ಲಕ್ಷ್ಯದಿಂದ ನಗರದ ವಾರ್ಡ್ ನಂ.೧೭ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದೆ ಜನರ ಬದುಕು ದುಸ್ತರವಾಗಿದ್ದು, ಜನತೆಯ ಸಮಸ್ಯೆಗಳನ್ನು ಕೇಳುವವರು ಇಲ್ಲದಂತಾಗಿದೆ.
ವಾರ್ಡ್‌ಗೆ ಭೇಟಿ ನೀಡಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯರು, ವಾರ್ಡ್‌ನ ಬಹುತೇಕ ರಸ್ತೆಗಳಲ್ಲಿ ಮೋರಿ ಹಾಗೂ ಡಾಂಬರು ಹಾಕದ ಕಾರಣ ಮಳೆ ಬಂದರೆ ಮಳೆ ನೀರು ಸಮೇತ ರಸ್ತೆಯಲ್ಲಿರುವ ಗಲೀಜು ಸೇರಿ ಮನೆಗಳ ಒಳಗೆ ಬರುತ್ತದೆ ಎಂದು ದೂರಿದರು.
ವಾರ್ಡ್‌ಗೆ ಕಸ ತೆಗೆದುಕೊಳ್ಳುವ ವಾಹನ ಬಾರದ ಕಾರಣ ಹಲವು ವರ್ಷದಿಂದ ಕಸ ತೆಗೆಯದೆ ಗಬ್ಬು ನಾರುತ್ತಾ ಸೊಳ್ಳೆಗಳ ಕಾಟ, ಅಲ್ಲದೆ ಕಸ ಕೊಳೆತು ಹುಳಬಿದ್ದು ಕಾಯಿಲೆಗಳನ್ನು ಹರಡುವ ತಾಣಗಳಾಗಿವೆ ಎಂದು ಆರೋಪಿಸಿದರು.
ರಸ್ತೆಗಳು ಮೊದಲೇ ಕಿರಿದಾಗಿದ್ದು ಮಳೆ ಬಂದರೆ ನೀರು ತುಂಬುವ ಹಳ್ಳಗಳಿಂದ ದ್ವಿಚಕ್ರ ವಾಹನಗಳನ್ನು ಓಡಿಸಲು ಕಷ್ಟ ಹಾಗೂ ಜಾರಿಬಿದ್ದು ಹಲವರಿಗೆ ಗಾಯಗಳಾಗಿ ಕಾಲು ಮುರಿದು ಕೊಂಡ ಘಟನೆಗಳು ಬಹಳಷ್ಟು ನಡೆದಿವೆ. ಕೆಲವು ಕಡೆ ಮೋರಿ ಮಾಡಿ ಪಕ್ಕದಲ್ಲಿ ರಸ್ತೆ ಮುಚ್ಚದೆ ಮಕ್ಕಳು ಓಡಾಡಲೂ ಕಷ್ಟ ಆಗುತ್ತಿದೆ ಹಾಗೂ ಸದಾ ವಿದ್ಯುತ್ ಸಿಂಗಲ್ ಫೇಸ್ ಆಗಿ ರಸ್ತೆ ದೀಪಗಳೂ ಇರುವುದಿಲ್ಲ ಮತ್ತು ಸಮರ್ಪಕ ವಿದ್ಯುತ್ ಕಂಬಳು ಇಲ್ಲದೆ ಮಳೆ ಬಂದರೆ ಗ್ರೌಂಡಿಗ್ ಆಗಿ ಕರೆಂಟ್ ಶಾಕ್ ಹೊಡೆಯುತ್ತದೆ ಎಂದು ವಿವರಿಸಿದರು.
ನಗರ ಸಭೆ ಸದಸ್ಯೆ ಎಸ್.ಡಿ.ಪಿ.ಐ.ನ ನಿಖತ್ ಫಾತೀಮಾ ಆಗಲಿ ಶಾಸಕ ಕೊತ್ತೂರು ಮಂಜುನಾಥ್ ರವರಾಗಲಿ ಗೆದ್ದು ಹೋದವರು ಈವರೆಗೂ ವಾರ್ಡ್‌ಗೆ ಭೇಟಿ ನೀಡಿಲ್ಲ ಜನರ ಸಮಸ್ಯೆ ಬಗ್ಗೆ ವಿಚಾರಿಸಿಲ್ಲ ಎಂದು ಸ್ಥಳೀಯರ ದೂರಾಗಿದೆ.
ನಗರಸಭೆ ಸದಸ್ಯೆ ಗಂಡ ಶಾಮೀರ್ ರವರ ಗಮನಕ್ಕೆ ಸಮಸ್ಯೆಗಳ ಬಗ್ಗೆ ಹಲವು ಬಾರಿ ತಂದರೂ ಯಾವುದೇ ಪ್ರಯೋಜನ ಆಗಿಲ್ಲ, ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ, ಶಾಸಕರು ಸ್ಥಳ ಪರಿಶೀಲನೆ ಮಾಡಿ ವಾರ್ಡ್‌ಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.