
ತುಮಕೂರು. ಫೆ. ೩- ಮಹಿಳೆಯರು ಹಾಗೂ ಕುಟುಂಬಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ತುಮಕೂರಿನ ದಾನ್ ಫೌಂಡೇಶನ್ ವತಿಯಿಂದ ಮಹಿಳೆಯರಿಗೆ ಸುಸ್ಥಿರ ಆರ್ಥಿಕ ಸೇರ್ಪಡೆ ಜಾಗೃತಿ ಜಾಥಾ ವಾಕಥಾನ್ ೨೦೨೬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಬದಲಾವಣೆಗಳ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದೇ ಈ ಜಾಥಾದ ಮುಖ್ಯ ಉದ್ದೇಶವಾಗಿದೆ.
ನಗರದ ಟೌನ್‌ಹಾಲ್ ಸರ್ಕಲ್‌ನಿಂದ ಬಾಲ ಭವನದವರೆಗೆ ಜಾಥಾ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದಾನ್ ಫೌಂಡೇಶನ್ ಪ್ರತಿನಿಧಿಗಳು, ಪ್ರತಿಯೊಬ್ಬ ಕುಟುಂಬವೂ ಆರ್ಥಿಕವಾಗಿ ಮುಂದೆ ಬರಬೇಕಾದರೆ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ನೇರ ಸಂಪರ್ಕ ಹೊಂದುವುದು ಅಗತ್ಯವಿದೆ ಎಂದು ಹೇಳಿದರು.
ಡಿಜಿಟಲೀಕರಣದ ನಂತರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗಿದ್ದರೂ, ಅದೇ ಸಮಯದಲ್ಲಿ ಡಿಜಿಟಲ್ ಮೋಸಗಳಿಗೆ ಒಳಗಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದ್ದರಿಂದ ಬ್ಯಾಂಕಿನ ವ್ಯವಹಾರಗಳನ್ನು ಹೇಗೆ ಸುರಕ್ಷಿತವಾಗಿ ಮಾಡಬೇಕು, ಡಿಜಿಟಲ್ ವಹಿವಾಟಿನಲ್ಲಿ ಯಾವೆಲ್ಲ ಎಚ್ಚರಿಕೆ ವಹಿಸಬೇಕು ಎಂಬುದರ ಕುರಿತು ಜನರಿಗೆ ತಿಳುವಳಿಕೆ ನೀಡುವುದು ಅತ್ಯಂತ ಮುಖ್ಯವಾಗಿದೆ ಎಂದು ಅವರು ತಿಳಿಸಿದರು.
ದಾನ್ ಫೌಂಡೇಶನ್ ಸಂಸ್ಥೆ ಈಗಾಗಲೇ ೮೫೩ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಪ್ರದೇಶದ ಮಹಿಳೆಯರು ಹಾಗೂ ಕುಟುಂಬಗಳಿಗೆ ಆರ್ಥಿಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. ಈ ಜಾಗೃತಿ ಅಭಿಯಾನದ ಮೂಲಕ ಸುಮಾರು ೪೨,೦೦೦ ಕುಟುಂಬಗಳಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ.
ಈ ಜಾಥಾದಲ್ಲಿ ಮಹಿಳೆಯರು, ಸ್ವಯಂಸೇವಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿ, ಬ್ಯಾಂಕಿಂಗ್ ಮೂಲಕ ಭದ್ರ ಭವಿಷ್ಯ, ಡಿಜಿಟಲ್ ವ್ಯವಹಾರದಲ್ಲಿ ಜಾಗೃತಿ ಅಗತ್ಯ ಎಂಬ ಘೋಷಣೆಗಳನ್ನು ಕೂಗಿದರು. ಈ ಕಾರ್ಯಕ್ರಮವು ಮಹಿಳೆಯರ ಆರ್ಥಿಕ ಸೇರ್ಪಡೆಗೆ ಹಾಗೂ ಸಮಾಜದ ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ಪ್ರೇರಣೆಯಾಯಿತು. ದಾನ್ ಫೌಂಡೇಶನ್ ತುಮಕೂರು ವಲಯ ಪ್ರಾದೇಶಿಕ ಸಂಯೋಜಕರಾದ ವಸಂತ್ ಕುಮಾರ್ ಎಂ. ಕೆ., ಕಸ್ತೂರ್ಬಾ ಆಸ್ಪತ್ರೆಯ ವ್ಯವಸ್ಥಾಪಕರಾದ ವರುಣ್, ಕೆನರಾ ಬ್ಯಾಂಕ್ ಎಜಿಎಂ ಗಂಗೇಶ್, ಪಿಒಬಿ ಬ್ಯಾಂಕ್ ವ್ಯವಸ್ಥಾಪಕರಾದ ನವೀನ್, ದಯಾ ಸ್ಪರ್ಶ ಆಸ್ಪತ್ರೆಯ ರುಕಿಯ, ಮಂಜುನಾಥ ಆಸ್ಪತ್ರೆಯ ರಮೇಶ್ ಹಾಗೂ ದಾನ್ ಫೌಂಡೇಶನ್ ಪ್ರತಿನಿಧಿಗಳು ಪಾಲ್ಗೊಂಡಿದ್ದರು.


























