ಮತಗಳ್ಳತನ ರಾಗಾ ಕಿಡಿ

ನವದೆಹಲಿ,ಸೆ.೧೮- ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಮತ್ತೆ ತೀವ್ರ ವಾಗ್ದಾಳಿ ನಡೆಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ, ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಕಾಂಗ್ರೆಸ್ ಬೆಂಬಲಿಗರ ಮತಗಳನ್ನು ವ್ಯವಸ್ಥಿತವಾಗಿ ಅಳಿಸಿ ಹಾಕಲಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.


ಮತಗಳ್ಳರು ಮತ್ತು ಪ್ರಜಾಪ್ರಭುತ್ವ ನಾಶ ಮಾಡುವವರನ್ನು ಮುಖ್ಯಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ರಕ್ಷಣೆ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.


ಬಿಹಾರದಲ್ಲಿ ಮತಗಳ್ಳತನ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಅಭಿಯಾನ ಕೈಗೊಂಡ ಬೆನ್ನಲ್ಲೆ ದೆಹಲಿಯ ಇಂದಿರಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮತಗಳ್ಳತನ ನಡೆದಿರುವ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದರು. ಚುನಾವಣಾ ಆಯೋಗ ಮತದಾರರ ಹೆಸರು ಅಳಿಸಿ ಹಾಕುವುದನ್ನು ಮೊದಲು ನಿಲ್ಲಿಸಬೇಕು. ಈ ಬಗ್ಗೆ ಕರ್ನಾಟಕ ಸಿಐಡಿ ಕೇಳಿರುವ ಮಾಹಿತಿಯನ್ನು ಚುನಾವಣಾ ಆಯೋಗ ತಕ್ಷಣ ಒದಗಿಸಬೇಕು ಎಂದು ಒತ್ತಾಯಿಸಿದರು.


ಕರ್ನಾಟಕದ ಅಳಂದಾದಲ್ಲಿ ೨೦೨೩ರ ಚುನಾವಣೆ ಸಂದರ್ಭದಲ್ಲಿ ಮತಗಳನ್ನು ಅಳಿಸಿ ಹಾಕುವ ಯತ್ನ ನಡೆದಿದೆ. ಮತ್ತೊಂದೆಡೆ ಮಹಾರಾಷ್ಟ್ರದ ರಾಜುರಾ ಕ್ಷೇತ್ರದಲ್ಲಿ ಸ್ವಯಂಚಾಲಿನ ತಂತ್ರಾಂಶ ಬಳಸಿ ಕುತಂತ್ರದಿಂದ ಮತಗಳನ್ನು ಸೇರಿಸುವ ಪ್ರಯತ್ನ ನಡೆದಿದೆ. ಎಲ್ಲ ಅಕ್ರಮಗಳಿಗೆ ಜ್ಞಾನೇಶ್‌ಕುಮಾರ್ ಕಾರಣರಾಗಿದ್ದು, ಅವರ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಬೇಡಿ. ಚುನಾವಣಾ ಆಯೋಗ ಮತಗಳ್ಳರನ್ನು ರಕ್ಷಿಸುತ್ತಿದೆ. ಮತಗಳ್ಳರೇ ಭಾರತದ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.


ದೇಶದಲ್ಲಿ ಲಕ್ಷಾಂತರ ಮತದಾರರನ್ನು ಮತಪಟ್ಟಿಯಿಂದ ಅಳಿಸಿ ಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕನಾಗಿರುವ ತಾವು ಶೇ. ೧೦೦ ರಷ್ಟು ಪುರಾವೆಗಳಿಲ್ಲದೆ ಏನನ್ನೂ ಹೇಳುವುದಿಲ್ಲ. ಅಳಂದಾದಲ್ಲಿ ೬೦೧೮ ಮತಗಳನ್ನು ಅಳಿಸಿ ಹಾಕಲು ಯಾರೋ ಪ್ರಯತ್ನಿಸಿದ್ದರು. ಆರೆ, ಕಾಕತಾಳೀಯವೆಂಬಂತೆ ಸಿಕ್ಕಿ ಬಿದ್ದಿದ್ದರು, ತಮ್ಮ ಚಿಕ್ಕಪ್ಪನ ಹೆಸರೇ ಮತದಾರರ ಪಟ್ಟಿಯಲ್ಲಿರದಿರುವುದನ್ನು ಬೂತ್ ಮಟ್ಟದ ಅಧಿಕಾರ ಗಮನಿಸಿದ್ದಾರೆ. ಆದರೆ, ಇದರ ಹಿಂದೆ ಬೇರೆ ಶಕ್ತಿ ಇದೆ ಎಂದು ಅವರು ಸಂಶಯ ವ್ತಕ್ತಪಡಿಸಿದರು.


ಮತದಾರರಂತೆ ನಟಿಸಿ ೬೦೧೮ ಅರ್ಜಿಗಳನ್ನು ಅಳಿಸಿ ಹಾಕಲಾಗಿದೆ. ಕರ್ನಾಟಕಕ್ಕೆ ಸೇರದ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಈ ಅರ್ಜಿಗಳು ಸ್ವಯಂಚಾಲಿತ ತಂತ್ರಾಂಶದ ಮೂಲಕ ದಾಖಲಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.


ಕಳೆದ ೧೮ ತಿಂಗಳ ಅವಧಿಯಲ್ಲಿ ಚುನಾವಣಾ ಆಯೋಗಕ್ಕೆ ಸಿಐಡಿ ೧೮ ಪತ್ರಗಳನ್ನು ಕಳುಹಿಸಿದೆ. ಯಾವ ಪ್ರದೇಶದಿಂದ ಈ ಮತದಾರರ ಹೆಸರು ನೋಂದಣಿಯಾಗಿದೆ ಎಂಬುದಕ್ಕೆ ಪೂರಕವಾದ ಐಪಿ ವಿಳಾಸ ಹಾಗೂ ಅದಕ್ಕೆ ಬಳಸದ ಓಟಿಪಿ ಮಾಹಿತಿ ನೀಡುವಂತೆ ಚುನಾವಣಾ ಆಯೋಗವನ್ನು ಸಿಐಡಿ ಕೇಳಿದೆ. ಆದರೆ, ಆಯೋಗವು ಏಕೆ ನೀಡುತ್ತಿಲ್ಲ ಎಂದು ರಾಹುಲ್‌ಗಾಂಧಿ ಪ್ರಶ್ನಿಸಿದರು.


ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರು ಅಳಿಸುವುದು ಹಾಗೂ ಸೇರಿಸುವುದನ್ನು ಯಾರು ಮಾಡುತ್ತಿದ್ದಾರೆ ಎಂಬುದು ಚುನಾವಣಾ ಆಯೋಗಕ್ಕೆ ಗೊತ್ತಿದೆ. ಭಾರತದ ಪ್ರತಿಯೊಬ್ಬ ಯುವಕರೂ ಇದನ್ನು ತಿಳಿಯಬೇಕು ಎಂದು ನಾನು ಬಯಸುತ್ತೇನೆ. ಕೇಳಿದ ಮಾಹಿತಿಯನ್ನು ಆಯೋಗ ನೀಡುತ್ತಿಲ್ಲವೆಂದಾದರೆ ಪ್ರಜಾಪ್ರಭುತ್ವದ ಕೊಲೆಗಾರರನ್ನು ರಕ್ಷಿಸುತ್ತಿದ್ದಾರೆ ಎಂದರ್ಥ ಎಂದು ಅವರು ಆರೋಪಿಸಿದರು.

ಕರ್ನಾಟಕದಲ್ಲಿ ಸಿಐಡಿ ತನಿಖೆ ಆರಂಭ


ಕರ್ನಾಟಕ ಸಿಐಡಿ ಚುನಾವಣಾ ಆಯೋಗದಿಂದ ವಿವರಗಳನ್ನು ಪಡೆಯಲು ತನಿಖೆ ಪ್ರಾರಂಭಿಸಿದೆ. ಆದರೆ ಚುನಾವಣಾ ಆಯೋಗ ವಿವರಗಳನ್ನು ನೀಡುತ್ತಿಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ


೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಅಳಂದ ವಿಧಾನಸಭಾ ಕ್ಷೇತ್ರದಲ್ಲಿ ೬೦೧೮ ಮತಗಳನ್ನು ಅಳಿಸಲು ಪ್ರಯತ್ನಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರು ಅಳಿಸಿ ಹಾಕಿರುವ ಬಗ್ಗೆ ತಿಳಿದು ಪರಿಶೀಲಿಸಿದಾಗ ಬೇರೆ ಯಾವುದೇ ವ್ಯಕ್ತಿ ಹೈಜಾಕ್ ಮಾಡಿ ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗಿದೆ ಎಂದು ಹೇಳಿದ್ದಾರೆ.
ಈ ಸಂಬಂಧ ಕರ್ನಾಟಕ ಸಿಐಡಿ ತನಿಖೆ ಆರಂಭಿಸಿದೆ, ಸತ್ಯಾಂಶ ಹೊರಬರಲಿದೆ, ಆದರೆ ಚುನಾವಣಾ ಆಯೋಗ ಮಾಹಿತಿ ನೀಡಲು ನಿರಾಕರಿಸುತ್ತಿದೆ ಎಂದು ದೂರಿದ್ಧಾರೆ.


ಮತದಾರರ ಪಟ್ಟಿಗೆ ಮತಗಳನ್ನು ಯಾವ ವಿಧಾನದ ಮೂಲಕ ಸೇರಿಸಲಾಗುತ್ತಿದೆ ಮತ್ತು ಅಳಿಸಲಾಗುತ್ತಿದೆ ಮತ್ತು ಅದನ್ನು ಹೇಗೆ ಮಾಡಲಾಗುತ್ತದೆ ಎನ್ನುವುದನ್ನು ತಿಳಿದರೆ ಆಶ್ಚರ್ಯವಾಗಲಿದೆ ಎಂದು ಹೇಳಿದ್ದಾರೆ

ರಾಹುಲ್ ಆರೋಪ ಆಯೋಗ ತಿರಸ್ಕಾರ


ದೇಶದ ಮುಖ್ಯ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪಗಳನ್ನು ಆಧಾರರಹಿತ ಎಂದು ಚುನಾವಣಾ ಆಯೋಗ ತಿರಸ್ಕರಿಸಿದೆ


ರಾಹುಲ್ ಗಾಂಧಿ ಆಧಾರರಹಿತ ಮತ್ತು ತಪ್ಪು ಮಾಹಿತಿ ನೀಡುತ್ತಿದ್ದಾಋಎ. ರಾಹುಲ್ ಗಾಂಧಿ ಅವರ ದೊಡ್ಡ ಮತ ಚೋರಿ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ


ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತದಾರರ ಪಟ್ಟಿ ಅಳಿಸುವಿಕೆ ಕುರಿತು ಮಾಡಿದ ಆರೋಪಗಳನ್ನು ಭಾರತೀಯ ಚುನಾವಣಾ ಆಯೋಗ ತಳ್ಳಿಹಾಕಿದ್ದು, “ತಪ್ಪು ಮತ್ತು ಆಧಾರರಹಿತ” ಎಂದು ಕರೆದಿದೆ, ಸಾರ್ವಜನಿಕರಿಂದ ಯಾವುದೇ ಮತಗಳನ್ನು ಆನ್‌ಲೈನ್‌ನಲ್ಲಿ ಅಳಿಸಿ ಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ


ಆದಾಗ್ಯೂ, ಕರ್ನಾಟಕದ ಅಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಅಳಿಸಲು ಕೆಲವು ವಿಫಲ ಪ್ರಯತ್ನಗಳು ನಡೆದಿವೆ ಎಂದು ಚುನಾವಣಾ ಸಂಸ್ಥೆ ಒಪ್ಪಿಕೊಂಡಿದೆ ಮತ್ತು ಈ ವಿಷಯದ ಬಗ್ಗೆ ತನಿಖೆ ನಡೆಸಲು ಇಸಿಐ ಸ್ವತಃ ಎಫ್‌ಐಆರ್ ದಾಖಲಿಸಿದೆ.


ಕರ್ನಾಟಕದ ಅಳಂದ ವಿಧಾನಸಭಾ ಕ್ಷೇತ್ರದಲ್ಲಿ೬,೦೧೮ ಮತಗಳನ್ನು ರಾಜ್ಯದ ಹೊರಗಿನಿಂದ ಸಾಫ್ಟ್‌ವೇರ್ ಮತ್ತು ಫೋನ್ ಸಂಖ್ಯೆಗಳನ್ನು ಬಳಸಿಕೊಂಡು ಯಾರೋ ಅಳಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನಿಡಿರುವ ಆಯೋಗ ಇದು ಸಂಪೂರ್ಣ ಆಧಾರ ರಹಿತ ಎಂದಿದ್ದಾರೆ.
“೨೦೨೩ ರಲ್ಲಿ, ಅಳಂಧ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರನ್ನು ಅಳಿಸಲು ಕೆಲವು ವಿಫಲ ಪ್ರಯತ್ನ ಮಾಡಲಾಯಿತು, ಮತ್ತು ಈ ವಿಷಯದ ತನಿಖೆ ಮಾಡಲು ಚುನಾವಣಾ ಯೋಗದಿಂದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.


ಅಳಂದ ವಿಧಾನಸಭಾ ಸ್ಥಾನವನ್ನು ೨೦೧೮ ರಲ್ಲಿ ಬಿಜೆಪಿಯ ಸುಭಾದ್ ಗುತ್ತೇದಾರ್ ಮತ್ತು ೨೦೨೩ ರಲ್ಲಿ ಕಾಂಗ್ರೆಸ್‌ನ ಬಿಆರ್ ಪಾಟೀಲ್ ಗೆಲುವು ಸಾಧಿಸಿದ್ದಾರೆ