
ಕುಣಿಗಲ್, ಮಾ. ೭- ಒಳ ಮೀಸಲಾತಿ ಜಾರಿ ಮಾಡದೆ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಾದರ ಮಹಾಸಭಾ ತಾಲ್ಲೂ ಅಧ್ಯಕ್ಷ ಮಳ್ಳಿಪಾಳ್ಯ ಶ್ರೀನಿವಾಸ್ ಎಚ್ಚರಿಕೆ ನೀಡಿದರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ೩೫ ವರ್ಷಗಳಿಂದಲೂ ನಿರಂತರವಾಗಿ ಒಳ ಮಿಸಲಾತಿ ಜಾರಿ ಮಾಡಿ ಎಂದು ಮಾದಿಗ ಸಮುದಾಯವು ಹೋರಾಟ ಮಾಡುತ್ತಿದ್ದರೂ ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೀವು ಸಾಮಾಜಿಕ ನ್ಯಾಯದ ಪರವಾಗಿ ಮುಖವಾಡ ಧರಿಸಿ ಮಾತನಾಡುವುದನ್ನು ಕೈ ಬಿಟ್ಟು ಮಾದಿಗ ಸಮುದಾಯದ ಜನರಿಗೆ ನ್ಯಾಯ ಕೊಡಿಸಲು ಮುಂದಾಗಬೇಕು ಎಂದರು.
ಈಗಾಗಲೇ ಅನೇಕ ಆಯೋಗಗಳನ್ನು ರಚಿಸಿ ಮಾದಿಗ ಸಮುದಾಯ ಜನರಿಗೆ ಅನ್ಯಾಯವಾಗಿರುವುದು ತಮಗೂ ಮನವರಿಕೆ ಆಗಿದ್ದರೂ ಸಹ ತಮ್ಮ ಸಚಿವ ಸಂಪುಟದ ಕೆಲವು ಸಚಿವರ ಪರವಾಗಿ ಮಾದಿಗ ಸಮುದಾಯದ ಜನರಿಗೆ ಅನ್ಯಾಯ ಮಾಡದೆ ಸಾಮಾಜಿಕ ನ್ಯಾಯದ ಪರವಾಗಿ ಸಂವಿಧಾನಬದ್ಧವಾಗಿ ಈ ವರ್ಗಕ್ಕೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡಬೇಕು. ಈ ವರ್ಗದ ಜನರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತಮ್ಮ ಮಕ್ಕಳ ವಿದ್ಯಾಭ್ಯಾಸ ಮಾಡದೆ ಚಪ್ಪಲಿ ಹಾಗೂ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು ತಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದರೆ ಪ್ರತಿಭಟನೆ ನಡೆಸುವ ಮೂಲಕ ಮಾ. ೧೨ ರಂದು ವಿಧಾನಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಧಾರವಾಡದಲ್ಲಿ ನಿರುದ್ಯೋಗ ಯುವಕರು ಹೋರಾಟದ ಹಿನ್ನೆಲೆಯಲ್ಲಿ ೫೬ ಸಾವಿರ ಹುದ್ದೆಗಳನ್ನು ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಒಳ ಮೀಸಲಾತಿ ಜಾರಿಗೊಳಿಸಿ ಉದ್ಯೋಗ ನೀಡಬೇಕು.ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದಂತೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತುಮಕೂರು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ವಿ ಶಿವಶಂಕರ್ ಮಾತನಾಡಿ, ಆಳುವ ಸರ್ಕಾರಗಳಾದ ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಹಲವಾರು ಆಯೋಗಗಳನ್ನು ರಚನೆ ಮಾಡಿ ಎಲ್ ಜಿ ಹಾವನೂರು, ಕಾಂತರಾಜ್ ಆಯೋಗ, ಎ ಜಿ ಸದಾಶಿವ ಆಯೋಗ, ಡಾ. ನಾಗಮೋಹನ್ ದಾಸ್ ಆಯೋಗವನ್ನು ರಚಿಸಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ವರದಿ ಪಡೆದರು. ಸ್ವಾತಂತ್ರ್ಯ ಬಂದ ನಂತರ ಮಾದಿಗ ಜನಾಂಗಕ್ಕೆ ಅಭಿವೃದ್ಧಿ ಆಗದೆ ತೊಂದರೆ ಅನುಭವಿಸಿದ ಹಿನ್ನೆಲೆಯಲ್ಲಿ ಕಳೆದ ೪೦ ವರ್ಷಗಳಿಂದಲೂ ನಿರಂತರವಾಗಿ ಹೋರಾಟ ಮಾಡುತ್ತಾ ಆಳುವ ಸರ್ಕಾರಗಳ ಮೇಲೆ ಒತ್ತಡ ಹೇರಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಮಾದಿಗ ಜನಾಂಗಕ್ಕೆ ಒಳ ಮೀಸಲಾತಿ ಜಾರಿ ಮಾಡಿ ಉದ್ಯೋಗ ಸೃಷ್ಟಿ ಮಾಡಬೇಕು ಎಂದು ಒತ್ತಾಯಿಸಿದರೂ ಸಹ ಸಾಮಾಜಿಕ ನ್ಯಾಯ ನೀಡದೆ ಅನ್ಯಾಯ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾ. ೧೨ರಂದು ಮುಖ್ಯಮಂತ್ರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಮುಖಂಡರಾದ ರಾಮಚಂದ್ರಯ್ಯ, ಜೈ ಕುಮಾರ್, ಶಿವಣ್ಣ, ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.























