ಧ್ವನಿ ಸುರುಳಿಗಳು ನಾಡಿನ ಸಾಂಸ್ಕೃತಿಕ ಸೊಬಗಿನ ಪ್ರತೀಕ : ಹಾಸಿಂಪೀರ ವಾಲಿಕಾರ

ಸಂಜೆವಾಣಿ ವಾರ್ತೆ,
ವಿಜಯಪುರ,ನ.೧೨:ಯುವ ಕವಿಮಿತ್ರ, ಕು .ಮಾಳು ವಾಲಿಕಾರ ಅವರು ಸ್ವತ: ಸಾಹಿತ್ಯ ರಚಿಸಿ ಅದಕ್ಕೆ ಪೂರಕವಾದ ಚಿತ್ರಗಳನ್ನು ಸಂಯೋಜಿಸಿ ಅಖಂಡ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ “ಭೂಮಿಯ ಮೇಲಿರೋ ಸ್ವರ್ಗವೇ ನನ್ನದು” ಎಂಬ ಧ್ವನಿಸುರುಳಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಬಿಡುಗಡೆಗೊಳಿಸಿ ಮಾತನಾಡಿದರು.
ವಿಜಯಪುರ ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ೭೦ನೇ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಧ್ವನಿಸುರುಳಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕನ್ನಡ ನಾಡಿನ ಕರಾವಳಿ ಕರ್ನಾಟಕ, ಮಲೆನಾಡು, ಬಯಲು ಸೀಮೆ, ಹಚ್ಚಹಸಿರಿನ ಪ್ರಕೃತಿ ಸೌಂದರ್ಯದ ವರ್ಣನೆಯನ್ನು ತಮ್ಮ ಧ್ವನಿಸುರುಳಿಯಲ್ಲಿ ಪ್ರತಿಪಾದಿಸಿದ ಮಾಳು ವಾಲಿಕಾರ ಅವರ ಕಲ್ಪನೆಯಲ್ಲಿ ಮೂಡಿ ಬಂದ ಕರುನಾಡಿನ ವರ್ಣನೆ ನಿಜಕ್ಕೂ ರೋಮಾಂಚನಕಾರಿಯಾಗಿದ್ದು ಇಂತಹ ಧ್ವನಿಸುರುಳಿಗಳು ಸಾಂಸ್ಕೃತಿಕ ಸೊಬಗಿನ ಪ್ರತೀಕ ಎಂದ ಅವರು ಇವರೊಬ್ಬ ಅದ್ಭುತ ಕವಿ, ಕಲಾವಿದರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
“ಕಪ್ಪು ಮಣ್ಣಿನ ನಾಡಿನಲ್ಲಿ ಸಿರಿ ಗಂಧದ ಗುಡಿಯಲ್ಲಿ” ಎಂಬ ಕರುನಾಡಿನ ಕಪ್ಪುಮಣ್ಣಿನ ಸೌಂದರ್ಯದ ಹಿನ್ನೆಲೆ ಒಳಗೊಂಡ ಧ್ವನಿಸುರುಳಿಯನ್ನು ಜಿಲ್ಲಾ ಕಸಾಪ ಗೌರವ ಅಧ್ಯೆಕ್ಷೆ ಭಾರತಿ ಪಾಟೀಲ ಬಿಡುಗಡೆಗೊಳಿಸಿ ಮಾತನಾಡಿದರು. ಮಾಳು ವಾಲಿಕಾರ ಅವರು ಈಗಾಗಲೇ ಹಲವಾರು ಧ್ವನಿಸುರುಳಿ ಬಿಡುಗಡೆಗೊಳಿಸಿದ್ದು, ಚಿಂಕಾರ ವನ್ಯಜೀವಿಧಾಮ, ಕೆಚ್ಚೆದೆಯ ಕನ್ನಡಿಗರು ಹಲಗಲಿಯ ಬೇಡರು, ಭೂಮಿಯ ಮೇಲಿನ ಕೈಲಾಸ ಹುಲಜಂತಿ, ಗುಳಬಾಳ ಕ್ರಾಸಿನ ಅಂಜನಿಪುತ್ರ. ಹೀಗೆ ಹಲವಾರು ಧ್ವನಿ ಸುರುಳಿಗಳು ಬಿಡುಗಡೆಯಾಗಿದ್ದು, ಇದೀಗ ಮಾಗವಾ ಎಂಬ ಯ್ಯೂಟುಬ್ ಚಾನೆಲನಲ್ಲಿ ಬಿಡುಗಡೆಯಾದ ಎರಡು ಅದ್ಭುತವಾದ ಧ್ವನಿಸುರುಳಿಗಳು ಇತಿಹಾಸದ ಪುಟ ಸೇರಿದವು ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ, ಶಿಲ್ಪಾ ಭಸ್ಮೆ, ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ಡಾ. ಆನಂದ ಕುಲಕರ್ಣಿ, ಕಮಲಾ ಮುರಾಳ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಜಗದೀಶ ಬೋಳಸೂರ, ಮಹ್ಮದಗೌಸ ಹವಾಲ್ದಾರ, ರಾಜೇಶ್ವರಿ ಮೋಪಗಾರ, ಯುವ ಕವಿ, ಮಾಳು ವಾಲಿಕಾರ, ಪ್ರಶಾಂತ ಬೆಣ್ಣಿಮುದ್ದಿ, ರಿಯಾಜ ಪಿಂಜಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮದಲ್ಲಿ ಅರ್ಜುನ ಶಿರೂರ, ಜಿ.ಎಸ್.ಬಳ್ಳೂರ, ಮಹಾದೇವ ಮೋಪಗಾರ, ಲತಾ ಗುಂಡಿ, ಶಾಂತಾ ವಿಭೂತಿ, ಗಿರಿಜಾ ಪಾಟೀಲ, ರಾಜೇಶ್ವರಿ ಜುಗತಿ, ದೊಡ್ಡಣ್ಣ ಭಜಂತ್ರಿ ಸೇರಿದಂತೆ ನೂರಕ್ಕೂ ಹೆಚ್ಚು ಕನ್ನಡಾಭಿಮಾನಿಗಳು ಭಾಗವಹಿಸಿ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಯಶಸ್ವಿಗೊಳಿಸಿದರು.