Home ಜಿಲ್ಲೆ ವಿಷನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ವೇತನ ಪ್ರತಿಭಾ ಪರೀಕ್ಷೆಯಾದಗಿರಿಯಲ್ಲಿ ಶೈಕ್ಷಣಿಕ ಪುನರುಜ್ಜೀವನಕ್ಕೆ ಮಹತ್ವಾಕಾಂಕ್ಷಿ ದಿಟ್ಟ...

ವಿಷನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ವೇತನ ಪ್ರತಿಭಾ ಪರೀಕ್ಷೆಯಾದಗಿರಿಯಲ್ಲಿ ಶೈಕ್ಷಣಿಕ ಪುನರುಜ್ಜೀವನಕ್ಕೆ ಮಹತ್ವಾಕಾಂಕ್ಷಿ ದಿಟ್ಟ ಹೆಜ್ಜೆ

ಯಾದಗಿರಿ:ಫೆ.20:ವಿಷನ್ ಆಂಗ್ಲ ಮಾಧ್ಯಮ ಶಾಲೆ, ಕಾಡ್ಲೂರು ಪೆಟ್ರೋಲ್ ಪಂಪ್ ಸಮೀಪ, ಚೌವ್ಹಾಣ ಆಸ್ಪತ್ರೆ ಹಿಂಭಾಗದಲ್ಲಿ ವಿದ್ಯಾರ್ಥಿ ವೇತನ ಪ್ರತಿಭಾ ಪರೀಕ್ಷೆ ಆಯೋಜಿಸಲಾಗುತ್ತಿದೆ.

ಕಲ್ಯಾಣ ಕರ್ನಾಟಕದ ಅತಿ ಹಿಂದುಳಿದ ಜಿಲ್ಲೆಗಳ ಪೈಕಿ ಒಂದಾಗಿ ಗುರುತಿಸಿಕೊಂಡಿರುವ ಯಾದಗಿರಿ ಜಿಲ್ಲೆಯ ಶೈಕ್ಷಣಿಕ ಹಿನ್ನಡೆ ಬಗ್ಗೆ ಸಮಾಜದ ವಿವಿಧ ವಲಯಗಳಲ್ಲಿ ತೀವ್ರ ಚಿಂತನೆ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ, ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ರೂಪಿಸುವ ಮಹತ್ವಾಕಾಂಕ್ಷಿ ಉದ್ದೇಶದೊಂದಿಗೆ ಚೌಧರಿ ಎಜುಕೇಶನಲ್ ಚಾರಿಟೇಬಲ್ ಮತ್ತು ಸೋಶಿಯಲ್ ವೆಲ್‍ಫೇರ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ಪ್ರತಿಭಾ ಪರೀಕ್ಷೆ ಆಯೋಜಿಸಲು ಮುಂದಾಗಿರುವುದು ಗಮನಾರ್ಹ ಹಾಗೂ ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಈ ಕುರಿತು ಟ್ರಸ್ಟ್ ಅಧ್ಯಕ್ಷ ಕುರ್ಶಿದ ಆಲಂ ಚೌಧರಿ ಅವರು ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷ ಪ್ರಕಟವಾಗುವ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶ ಪಟ್ಟಿಯಲ್ಲಿ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲೇ ಉಳಿಯುತ್ತಿರುವುದು ಜಿಲ್ಲೆಯ ಶೈಕ್ಷಣಿಕ ಹಿನ್ನಡೆಯ ದುಸ್ಥಿತಿಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. ಇದು ಜಿಲ್ಲೆಯ ಗೌರವಕ್ಕೆ ಕಪ್ಪು ಚುಕ್ಕೆ ಎನಿಸಿರುವ ಹಿನ್ನೆಲೆಯಲ್ಲಿ, ಶೈಕ್ಷಣಿಕ ಪುನರುಜ್ಜೀವನಕ್ಕೆ ದಿಟ್ಟ ಸಂಕಲ್ಪದೊಂದಿಗೆ ಟ್ರಸ್ಟ್ ಸ್ಥಾಪನೆ ಮಾಡಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ತೀವ್ರ ಕೊರತೆ, ಶೈಕ್ಷಣಿಕ ಮೂಲಸೌಕರ್ಯಗಳ ಅಭಾವ, ಸಮರ್ಪಕ ಮಾರ್ಗದರ್ಶನದ ಕೊರತೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಉತ್ತಮ ಅವಕಾಶಗಳಿಗಾಗಿ ಬೇರೆ ಜಿಲ್ಲೆಗಳತ್ತ ವಲಸೆ ಹೋಗುತ್ತಿರುವುದು ಫಲಿತಾಂಶ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ. ಈ ದುಸ್ಥಿತಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ದೃಷ್ಟಿಯಿಂದ, ಟ್ರಸ್ಟ್ ಅಧೀನದಲ್ಲಿ ಶಾಲಾ-ಕಾಲೇಜುಗಳನ್ನು ಸ್ಥಾಪಿಸಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಸಮಗ್ರ ಶೈಕ್ಷಣಿಕ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಯೋಜನೆಯ ಪ್ರಥಮ ಹಂತವಾಗಿ 8ನೇ ಹಾಗೂ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪ್ರತಿಭಾ ಪರೀಕ್ಷೆ ನಡೆಸಲಾಗುವುದು. ಪ್ರತಿ ತರಗತಿಯಿಂದ 10 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಒಂದು ವರ್ಷದ ಸಂಪೂರ್ಣ ಉಚಿತ ಶಿಕ್ಷಣ, ಪಠ್ಯಸಾಮಗ್ರಿ, ಯೂನಿಫಾರ್ಮ್ ಹಾಗೂ ಶೈಕ್ಷಣಿಕ ಮಾರ್ಗದರ್ಶನ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಯೋಜನೆಯಿಂದ ಆರ್ಥಿಕ ಹಿಂದುಳಿತ ಕುಟುಂಬಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಭಾರವಾಗದೆ, ಅವರಲ್ಲಿ ಆತ್ಮವಿಶ್ವಾಸ, ಸ್ಪರ್ಧಾತ್ಮಕ ಮನೋಭಾವ ಹಾಗೂ ಶೈಕ್ಷಣಿಕ ಸಾಮಥ್ರ್ಯ ವೃದ್ಧಿಯಾಗಲಿದೆ. ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳು ಜಿಲ್ಲೆಯಲ್ಲಿಯೇ ಉಳಿದು ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ತಂದುಕೊಡುವ ಮೂಲಕ ಯಾದಗಿರಿ ಜಿಲ್ಲೆಯ ಶೈಕ್ಷಣಿಕ ಪ್ರತಿಷ್ಠೆಯನ್ನು ಉನ್ನತಿಗೇರಿಸುವಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ರಮೇಣವಾಗಿ ಇತರೆ ಖಾಸಗಿ ಹಾಗೂ ಸೇವಾ ಮನೋಭಾವದ ಶಿಕ್ಷಣ ಸಂಸ್ಥೆಗಳೂ ಇದೇ ಮಾದರಿಯನ್ನು ಅನುಸರಿಸಿದರೆ ಜಿಲ್ಲೆಯಾದ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳಿ, ಯಾದಗಿರಿ ಜಿಲ್ಲೆ ಫಲಿತಾಂಶ ಪಟ್ಟಿಯಲ್ಲಿ ಮೇಲ್ಮಟ್ಟಕ್ಕೆ ಏರಿ ಭವಿಷ್ಯದಲ್ಲಿ ಪ್ರಥಮ ಸ್ಥಾನಕ್ಕೇರುವ ದಿನ ದೂರದಲ್ಲಿಲ್ಲ. ಆ ಮೂಲಕ ಯಾದಗಿರಿ ನಿಜಾರ್ಥದಲ್ಲಿ ಕಲ್ಯಾಣ ಕರ್ನಾಟಕದ ವಿದ್ಯಾನಗರಿಯಾಗಿ ರೂಪಾಂತರಗೊಳ್ಳಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಲಾಗಿದೆ.

ವಿದ್ಯಾರ್ಥಿ ವೇತನ ಪ್ರತಿಭಾ ಪರೀಕ್ಷೆಗೆ ಹಾಜರಾಗಲು ಆಸಕ್ತಿಯಿರುವ 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳು ವಿಷನ್ ಆಂಗ್ಲ ಮಾಧ್ಯಮ ಶಾಲೆ, ಕಾಡ್ಲೂರು ಪೆಟ್ರೋಲ್ ಪಂಪ್ ಸಮೀಪ, ಚೌವ್ಹಾಣ ಆಸ್ಪತ್ರೆ ಹಿಂಭಾಗ ಇಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9019697787 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಈ ಸಂದರ್ಭದಲ್ಲಿ ಸಂಸ್ಥೆಯ ಎಚ್‍ಒಡಿ ವೆಂಕಟೇಶ್ ವಿ. ಚೌಹಾಣ್ ಉಪಸ್ಥಿತರಿದ್ದು, ಯೋಜನೆಯ ಕಾರ್ಯಾನುಷ್ಠಾನ, ಪರೀಕ್ಷಾ ವಿಧಾನ ಹಾಗೂ ಆಯ್ಕೆ ಪ್ರಕ್ರಿಯೆ ಕುರಿತು ವಿವರವಾದ ಮಾಹಿತಿ ನೀಡಿದರು. ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಶಿಕ್ಷಕ ವೃಂದ ಹಾಗೂ ಶಿಕ್ಷಣಾಸಕ್ತರು ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

ಯೋಜನೆಯ ಮಹತ್ವ ಹಾಗೂ ಉಪಯುಕ್ತತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪತ್ರಿಕಾ ಮಾಧ್ಯಮಗಳು ಸಹಕರಿಸಬೇಕೆಂದು ಯಾದಗಿರಿಯ ಸಾರ್ವಜನಿಕರ ಪರವಾಗಿ ಹಾಗೂ ಟ್ರಸ್ಟ್ ಪರವಾಗಿ ಕುರ್ಶಿದ ಆಲಂ ಚೌಧರಿ ವಿನಯಪೂರ್ವಕವಾಗಿ ಮನವಿ ಮಾಡಿದ್ದಾರೆ.