ಫೆ.4ಕ್ಕೆ ವಿರಾಟ ಹಿಂದೂ ಸಮ್ಮೇಳನ

ಭಾಲ್ಕಿ:ಜ.29:ಪಟ್ಟಣದಲ್ಲಿ ಫೆ.4ಕ್ಕೆ ವಿರಾಟ ಹಿಂದೂ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಾಮಾಜಿಕ ಸಾಮರಸ್ಯ ಕರ್ನಾಟಕ ಉತ್ತರ ಪ್ರಾಂತ ಸಂಯೋಜಕ ಶಿವಲಿಂಗ ಕುಂಬಾರ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಂದು ಮಧ್ಯಾಹ್ನ 2 ಗಂಟೆಗೆ ಭಾಲ್ಕೇಶ್ವರ ಮಂದಿರ ಆವರಣದಿಂದ ಬೃಹತ್ ಶೋಭಾ ಯಾತ್ರೆ ಹೊರಡಲಿದೆ. ಬೊಮಗೊಂಡೇಶ್ವರ ವೃತ್ತ, ಬಸ್ ನಿಲ್ದಾಣ, ಜ್ಯೋತಿಬಾ ಫುಲೆ ವೃತ್ತ, ಸರಾಫ್ ಬಜಾರ್, ಮಹಾತ್ಮ ಗಾಂಧಿ ವೃತ್ತ ಮತ್ತು ಅಂಬೇಡ್ಕರ್ ವೃತ್ತದ ಮೂಲಕ ಚನ್ನಬಸವಾಶ್ರಮ ಪರಿಸರದಲ್ಲಿ ಶೋಭಾ ಯಾತ್ರೆ ಸಮಾವೇಶಗೊಳ್ಳಲಿದೆ.

ನಂತರ ಸಂಜೆ 5ಕ್ಕೆ ಚನ್ನಬಸವಾಶ್ರಮ ಪರಿಸರದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದ್ದು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ರಾಜೇಶ್ವರ ಶಿವಾಚಾರ್ಯ, ಶಂಕರರಾನಂದ ಸ್ವಾಮೀಜಿ, ಭಂತೇ ಸಂಗರಕೀತ, ಗೋವಿಂದ ಮಹಾರಾಜ, ಹಾವಗಿಲಿಂಗೇಶ್ವರ ಶಿವಾಚಾರ್ಯ ಸಾನ್ನಿಧ್ಯದಲ್ಲಿ ಆರ್‍ಎಸ್‍ಎಸ್‍ನ ಸಹ ಸರಕಾರ್ಯವಾಹ್ ಮುಕುಂದ ಜೀ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

ಇದು ಯಾವುದೇ ಒಂದು ಜಾತಿಗೆ ಸಿಮೀತವಾಗಿಲ್ಲ, ದೇಶದಲ್ಲಿನ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ, ಜಾಗೃತಿ ಮೂಡಿಸುವುದು ಈ ಹಿಂದೂ ಸಮ್ಮೇಳನದ ಆಶಯವಾಗಿದೆ.

ಪಟ್ಟಣದಲ್ಲಿನ ಸುಮಾರು 19 ವಿವಿಧ ಸಮಾಜದ ಮುಖಂಡರು ತಮ್ಮ ಸಮುದಾಯದ ಜನರೊಂದಿಗೆ ಭಾಗಿಯಾಗಲಿದ್ದಾರೆ. ಶೋಭಾ ಯಾತ್ರೆಯಲ್ಲಿ ವಿವಿಧ ಸಮುದಾಯದ ನೃತ್ಯ, ಶಾಲಾ ಕಾಲೇಜು ವಿದ್ಯಾರ್ಥಿಗಳ ಕೋಲಾಟ, ನೃತ್ಯ, ಮಹಾತ್ಮರ ಛದ್ಮವೇಷ ಸೇರಿ ಮುಂತಾದ ಪ್ರದರ್ಶನ ಗಮನ ಸೆಳೆಯಲಿವೆ.

ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಈ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವಿರಾಟ ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ರಾಚಪ್ಪ ಪಾಟೀಲ್, ಪ್ರಮುಖರಾದ ಸೋಮನಾಥಪ್ಪ ಅಷ್ಟೂರೆ, ಹಿರಿಯ ಮುಖಂಡ ಪ್ರಭುರಾವ ಧೂಪೆ, ಯುವ ಮುಖಂಡರಾದ ಶಿವು ಲೋಖಂಡೆ, ಪ್ರಸನ್ನ ಖಂಡ್ರೆ, ಜಯಕಿಶನ ಬಿಯಾನಿ, ವಿಲಾಸ ಬಕ್ಕಾ, ಅಶೋಕ ವಾಲೆ, ಮಹಾಂತೇಶ ಇದ್ದರು.