
ಬೀದರ್:ಫೆ.20: ಒಳ ಮೀಸಲಾತಿ ಬಗ್ಗೆ ಇರುವ ಗೊಂದಲಗಳು, ಸಮಸ್ಯೆಗಳು ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆಯಾಗುವ ವರೆಗೆ ಒಳಮೀಸಲಾತಿ ಕೈ ಬಿಟ್ಟು ಹಳೆ ಮೀಸಲಾತಿ ಜಾರಿಗೆ ತಂದು ನೇಮಕಾತಿ ಮತ್ತು ಶಿಕ್ಷಣಕ್ಕೆ ತೊಂದರೆಯಾಗದಂತೆ ಸೂಕ್ತ ಆದೇಶ ಹೊರಡಿಸುವಂತೆ ಬಲಗೈ ಜಾತಿಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿ ಮಹಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ್ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗೆ ಸಂಬಂಧಿಸಿದಂತೆ ಪ್ರವರ್ಗ-ಎ.ಬಿ.ಸಿ ಎಂದು ವರ್ಗೀಕರಿಸಿ ಜಾತಿ ಪ್ರಮಾಣ ಪತ್ರ ವಿತರಿಸಲು ಹೊರಡಿಸಿರುವ ಆದೇಶದಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ 02 ವರ್ಷಗಳಿಂದ ಒಳಮೀಸಲಾತಿಯ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಅಲ್ಲದೇ ಇತರೆ ಸಮುದಾಯದವರಿಗೂ ಉದ್ಯೋಗ ನೇಮಕಾತಿಯಲ್ಲಿ ಸಮಸ್ಯೆಯಾಗಿದ್ದು, ವಯೋಮಿತಿ ಮೀರಿದ ಅಭ್ಯರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ಈಗಿನ ಒಳಮೀಸಲಾತಿ ಪದ್ದತಿಯು ಬಲಗೈ ಸಮುದಾಯಗಳಿಗೆ ಮರಣ ಶಾಸನವಾಗಿದ್ದು, ಮುಖ್ಯಮಂತ್ರಿಗಳು ಅದನ್ನು ತಕ್ಷಣ ಹಿಂಪಡೆದು ಕಾಂಗ್ರೆಸ್ ಸರ್ಕಾರಕ್ಕೆ ಯಾವತ್ತು ಶೇಕಡಾ 90 ಪ್ರತಿಶತದಷ್ಟು ಮತ ನೀಡಬಹುದಾದ ಬಲಗೈ ಸಮುದಾಯಗಳಿಗೆ ನ್ಯಾಯ ಒದಗಿಸುವ ಕಾರ್ಯಕ್ಕೆ ಮುಂದಾಗುವಂತೆ ಕರೆ ನೀಡಿದರು.
ಸದ್ಯ ಒಳಮೀಸಲಾತಿ ಕಾನೂನು ರಾಜ್ಯಪಾಲರ ಅಂಗಳದಲ್ಲಿದ್ದು, ಯಾವಾಗ ಬೇಕಾದರೂ ರಾಜ್ಯಪಾಲರು ಅದನ್ನು ಜಾರಿ ಮಾಡಬಹುದಾಗಿರುವುದರಿಂದ ರಾಜ್ಯ ಸರ್ಕಾರ ಕೂಡಲೇ ಅದನ್ನು ಹಿಂಪಡೆದು ಅದರಲ್ಲಿನ ಅವೈಜ್ಞಾನಿಕ ಗೊಂದಲಗಳನ್ನು ಸರಿಪಡಿಸಿ ಎಲ್ಲಶೋಷಿತ ಸಮುದಾಯಗಳಿಗೆ ಅವರವರ ಹಕ್ಕು ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಬೀದರ್‍ನಿಂದ ಚಾಮರಾಜನರ ವರೆಗೆ ಗುರುವಾರ ಪತ್ರಿಕಾಗೋಷ್ಟಿಗಳು ಹಾಗೂ ಪ್ರಕಟಣೆ ಹೊರಡಿಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಕಾರ್ಯಕ್ಕೆ ಮುಂದಾಗಿದ್ದೇವೆ. ಈಗಾಗಲೆ ನಮ್ಮ ಪೂಜ್ಯ ಜ್ಞಾನಪ್ರಕಾಶ ಸ್ವಾಮಿಜಿ ನೇತೃತ್ವದಲ್ಲಿ ಚಂದ್ರಶೇಖರಯ್ಯ ಒಳಗೊಂಡಂತೆ ನಮ್ಮ ಬಲಗೈ ಸಮುದಾಯದ ಬಾಂಧವರು ಹೋರಾಟದ ರೂಪರೇಷ ಸಿದ್ದಪಡಿಸಿತ್ತಿದ್ದಾರೆ ಎಂದು ಎಚ್ಚರಿಸಿದರು.
ಡಿ.ಎಸ್.ಎಸ್ ರಾಜ್ಯ ಸಂಘಟನಾ ಸಂಚಾಲಕ ರಮೆಶ ಡಾಕುಳಗಿ ಮಾತನಾಡಿ, ಪರಿಶಿಷ್ಟ ಜಾತಿಯ ಎಲ್ಲಾ ಪ್ರವರ್ಗಗಳಿಗೂ ಮೀಸಲಾತಿಯು ನಿಗದಿತ 6+6+5ರ ಪ್ರಮಾಣದಂತೆ ಹಂಚಿಕೆಯಾಗುವ ದೃಷ್ಟಿಯಿಂದ ನೇಮಕಾತಿ ಪ್ರಾಧಿಕಾರಗಳನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಅಧಿಸೂಚನೆ ಹೊರಡಿಸುವ ಕುರಿತು.
ಹಲವು ನೇಮಕಾತಿ ಪ್ರಾಧಿಕಾರಗಳು ಅಂದರೆ, ವಿಶ್ವವಿದ್ಯಾಲಯಗಳಲ್ಲಿ ಒಂದೊಂದು ವಿಭಾಗವನ್ನು ಒಂದೊಂದು ಘಟಕವನ್ನಾಗಿ ಪರಿಗಣಿಸಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುವುದರಿಂದ ಎಲ್ಲಾ ಹುದ್ದೆಗಳು ಪ್ರವರ್ಗ-ಂ ಗೆ ನಿಗದಿಯಾಗುತ್ತಿದೆ. ಇದರಿಂದ ಪ್ರವರ್ಗ ಬಿ ಮತ್ತು ಸಿ ಗೆ ಅನ್ಯಾಯವಾಗುತ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ನಮ್ಮ ಮತಗಳು ಬೇಕು ಆದರೆ ನಮ್ಮ ಏಳಿಗೆ ಅವರಿಗೆ ಬೇಕಾಗಿಲ್ಲ. ನಮ್ಮ ಸಮುದಾಯದ ಪ್ರಭಾವಿ ಹುದ್ದೆಗಳಲ್ಲಿ ಪ್ರಭಾವಶಾಲಿ ಮಂತ್ರಿಗಳಿದ್ದರೂ ಸಮಾಜಕ್ಕೆ ಅನ್ಯಾಯ ಆಗುತ್ತಿದ್ದರೂ ದಿವ್ಯ ಮೌನ ವಹಿಸಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ತಮ್ಮ ಅಳಲು ತೋಡಿಕೊಂಡರು.
ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಬಾಬುರಾವ ಪಾಸ್ವಾನ್ ಮಾತನಾಡಿ, ಪ್ರಸ್ತುತ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದಲ್ಲಿ 19 ಜಾತಿಗಳನ್ನು ಬಲಗೈ ಸಮುದಾಯವೆಂದು ನಮೂದಿಸಲಾಗಿದೆ. ಆದರೆ, ರಾಜ್ಯ ಸರ್ಕಾರವು ನವೆಂಬರ್ 13 2025ರಂದು ಸೌಲಭ್ಯ ಪಡೆಯಲು ಹೊರಡಿಸಿರುವ ಆದೇಶದಲ್ಲಿ 63 ಜಾತಿಗಳನ್ನು ಬಲಗೈ ಸಮುದಾಯವೆಂದು ಗುರುತಿಸಿದ್ದು ಈ ಸಮುದಾಯದ ಎಲ್ಲಾ 63 ಜಾತಿಗಳು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪಡೆಯಲು ಸೂಕ್ತ ಆದೇಶ ಹೊರಡಿಸಬೇಕು. ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿರುವಂತೆ ಸಂವಿಧಾನದ ಅನುಚ್ಛೇದ 15 ಮತ್ತು 16ರಂತೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾತ್ರ ಒಳಮೀಸಲಾತಿಯನ್ನು ಸೀಮಿತಗೊಳಿಸಬೇಕು. ಉಳಿದ ‘ಯಾವುದೇ ಕ್ಷೇತ್ರಗಳಿಗೆ ಒಳಮೀಸಲಾತಿಯ ಅನ್ವಯಿಸುವುದಿಲ್ಲವೆಂದು ರಾಜ್ಯ ಸರ್ಕಾರವು ಸ್ಪಷ್ಟಪಡಿಸಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದ ಅವರು, ರಾಜ್ಯ ಪಾಲರ ಬಳಿ ಸಹ ಪ್ರತ್ಯೇಕ ನಿಯೋಗ ಕೊಂಡೊಯ್ದು ಈ ಅವೈಜ್ಞಾನಿಕವಾಗಿರುವ ಒಳ ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದೆಂದು ಮನವಿ ಮಾಡಲಾಗುವುದಾಗಿ ಹೇಳಿದರು.
ದಲಿತ ಸೇನೆ ಜಿಲ್ಲಾಧ್ಯಕ್ಷ ಶ್ರೀಪತರಾವ ದೀನೆ, ಡಿ.ಎಸ್.ಎಸ್ ಸಂಚಾಲಕ ಶಿವಕುಮಾರ ನೀಲಿಕಟ್ಟಿ, ಬಿವಿಪಿ ಅಧ್ಯಕ್ಷ ಸಂದೀಪ ಕಾಂಟೆ, ಬಿವಿಎಸ್ ಅಧ್ಯಕ್ಷ ಪ್ರದೀಪ ನಾಟೇಕರ್, ಅಂಬಾದಾಸ ಗಾಯಕವಾಡ, ಪುಟ್ಟು ದೀನೆ, ದಿಲೀಪ ಭೋಸ್ಲೆ, ರಮೇಶ ಪಾಸ್ವಾನ್, ಸೂರ್ಯಕಾಂತ ಸಾದೂರೆ, ಗೌರಿಶಂಕರ ವಾಘಮಾರೆ, ಭೀಮರಾವ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.
























