Home ಜಿಲ್ಲೆ ಗರ್ಭಾ, ದಾಂಡಿಯಾ ಕಾರ್ಯಕ್ರಮಗಳ ಹೆಸರಿನಲ್ಲಿ ಸಂಸ್ಕøತಿ ಉಲ್ಲಂಘನೆ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಕ್ಷೇಪ

ಗರ್ಭಾ, ದಾಂಡಿಯಾ ಕಾರ್ಯಕ್ರಮಗಳ ಹೆಸರಿನಲ್ಲಿ ಸಂಸ್ಕøತಿ ಉಲ್ಲಂಘನೆ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಕ್ಷೇಪ

ಬೀದರ: ನವರಾತ್ರಿ ಉತ್ಸವದ ಸಂದರ್ಭದಲ್ಲಿ ಗರ್ಭಾ (ದಾಂಡಿಯಾ) ನೃತ್ಯ ಕಾರ್ಯಕ್ರಮಗಳ ಆಯೋಜನೆಯ ಹೆಸರಿನಲ್ಲಿ ಹಿಂದೂ ಧಾರ್ಮಿಕ ಸಂಪ್ರದಾಯ ಹಾಗೂ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿ, ಇಂತಹ ಕಾರ್ಯಕ್ರಮಗಳನ್ನು ನಿಯಂತ್ರಿಸಬೇಕು ಮತ್ತು ನಿಯಮ ಉಲ್ಲಂಘಿಸುವ ಆಯೋಜಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಆಗ್ರಹಿಸಿವೆ.

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಪ್ರಖಂಡದ ವತಿಯಿಂದ ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ನವರಾತ್ರಿಯ ಒಂಬತ್ತು ದಿನಗಳು ನವದುರ್ಗೆಯರ ಪೂಜೆ, ಆರಾಧನೆ ಹಾಗೂ ಭಕ್ತಿಗೆ ಮೀಸಲಾದ ಪವಿತ್ರ ದಿನಗಳಾಗಿವೆ. ಆದರೆ, ಕೆಲವು ಕಡೆ ಗರ್ಭಾ ಮತ್ತು ದಾಂಡಿಯಾ ನೃತ್ಯ ಕಾರ್ಯಕ್ರಮಗಳನ್ನು ವ್ಯಾಪಾರೀಕರಣಗೊಳಿಸಿ, ಧಾರ್ಮಿಕ ಸಂಪ್ರದಾಯಗಳ ಆಶಯಕ್ಕೆ ವಿರುದ್ಧವಾಗಿ ಆಯೋಜಿಸಲಾಗುತ್ತಿದೆ ಎಂದು ಸಂಘಟನೆಯ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು.

ಇಂತಹ ಕಾರ್ಯಕ್ರಮಗಳ ಸಂದರ್ಭದಲ್ಲಿ ಅಶಿಸ್ತಿನ ಚಟುವಟಿಕೆಗಳು ನಡೆಯುವ ಸಾಧ್ಯತೆಗಳಿದ್ದು, ಸಮಾಜದಲ್ಲಿ ಅಶಾಂತಿ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ದೇವಿಯ ಪೂಜೆ ಮತ್ತು ಆರಾಧನೆಗೆ ಸಂಬಂಧಿಸಿದ ಸ್ಥಳಗಳಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು. ಕಲ್ಯಾಣ ಮಂಟಪಗಳು ಹಾಗೂ ಬಹಿರಂಗ ವೇದಿಕೆಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕಾರ್ಯಕ್ರಮಗಳ ಆಯೋಜಕರು ನಿಯಮಗಳನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ಮುಖಂಡರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ವೀರಶೆಟ್ಟಿ ಖ್ಯಾಮ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಎದ್ಲಾಪುರ, ಬಜರಂಗದಳ ಜಿಲ್ಲಾ ಸಂಯೋಜಕ ಭೀಮಣ್ಣ ಸೊರಳ್ಳಿ, ಸಹ ಸಂಯೋಜಕ ದತ್ತು ವಾಲ್ದೊಡ್ಡಿ, ಬೀದರ್ ಗ್ರಾಮಾಂತರ ಬಜರಂಗದಳ ಸಂಯೋಜಕ ಶಂಕರ ಖ್ಯಾಮ ಹಾಗೂ ಹಿಂದೂ ಮುಖಂಡರಾದ ಸಾಗರ ಪಾಠಕ ಮತ್ತು ಸಾಯಿನಾಥ್ ಮಂಗಲಗಿ ಉಪಸ್ಥಿತರಿದ್ದರು.