
ಜಮಖಂಡಿ:ಜಂಬಗಿ ಬಿ.ಕೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬಗಿ ಬಿ.ಕೆ. ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಹಕ್ಕುಪತ್ರ ಮಂಜೂರು ಮಾಡಿಸುವಲ್ಲಿ ಸಹಕರಿಸಿದ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರ ಕಾರ್ಯವೈಖರಿಯನ್ನು ಮೆಚ್ಚಿ ಗ್ರಾಮಸ್ಥರು ಅಭಿನಂದನಾ ಸಮಾರಂಭ ಆಯೋಜಿಸಿದರು.
ತಾಲೂಕಿನ ಟಕ್ಕೋಡ ಕ್ರಾಸ್ನಲ್ಲಿ ಅನಿಲ್ ಜಾಧವ ಹಾಗೂ ಸುನೀಲ ಟಕ್ಕೋಡ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರನ್ನು ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆನಂದ ನ್ಯಾಮಗೌಡ, “ನಿಮ್ಮ ಜಾಗ ನಿಮ್ಮದು ಎನ್ನುವ ಹಕ್ಕು ಇಲ್ಲದಂತಹ ಪರಿಸ್ಥಿತಿ ಹಿಂದೆ ಇತ್ತು. ನನ್ನ ತಂದೆ ಸಿದ್ದು ನ್ಯಾಮಗೌಡರು ಕೂಡ ಹಕ್ಕು ಕೊಡಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಿಸಿದ್ದರು. ಇದೀಗ ಸುಮಾರು 120 ಜನರಿಗೆ ಹಕ್ಕುಪತ್ರ ನೀಡುವ ಕಾರ್ಯ ಸರ್ಕಾರದಿಂದ ಆಗಿರುವುದು ಸಂತೋಷದ ಸಂಗತಿ” ಎಂದರು.
ಇನ್ನೂ ಕೆಲವರು ಹಕ್ಕುಪತ್ರ ಪಡೆಯಲು ಬಾಕಿ ಇದ್ದು, ಯಾರೂ ಆತಂಕಪಡಬೇಕಿಲ್ಲ. ಅಕ್ರಮ-ಸಕ್ರಮ ಯೋಜನೆ ಮತ್ತೆ ಜಾರಿಗೆ ಬರುವ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಜಿ ಸಲ್ಲಿಸುವವರಿಗೆ ಹಕ್ಕುಪತ್ರ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಪ್ರಸ್ತಾಪಿಸಿದ ಅವರು, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳ ಮೂಲಕ ಜನರಿಗೆ ವಿವಿಧ ರೀತಿಯ ನೆರವು ದೊರೆಯುತ್ತಿದೆ ಎಂದು ಹೇಳಿದರು.
ರೈತರ ವಿಚಾರವಾಗಿ ಮಾತನಾಡಿದ ಅವರು, ಕಬ್ಬು ಬೆಲೆ, ಬೆಳೆ ವಿಮೆ ಹಾಗೂ ಮಳೆಹಾನಿ ಸೇರಿದಂತೆ ರೈತರ ಸಮಸ್ಯೆಗಳ ಕುರಿತು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಯುವಕರ ಸಂಘಟನೆ ಕುರಿತು ಮಾತನಾಡಿದ ನ್ಯಾಮಗೌಡ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 18ರಿಂದ 35 ವರ್ಷದೊಳಗಿನ ಯುವಕರನ್ನು ಸಂಘಟಿಸಿ ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಯುವ ಸಂಘಟನೆಗಳನ್ನು ರಚಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಯುವಕರಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಆರ್ಥಿಕ ನೆರವು ದೊರೆಯಲಿದೆ ಎಂದು ತಿಳಿಸಿದರು.
ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳ ಕುರಿತು ಮಾತನಾಡಿದ ಅವರು, ಸರ್ಕಾರದ ಯೋಜನೆಗಳ ಪ್ರಯೋಜನ ಜನರಿಗೆ ತಲುಪುತ್ತಿದ್ದು, ಮುಂದಿನ ದಿನಗಳಲ್ಲಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಇದೇ ವೇಳೆ ಜಂಬಗಿ-ಟಕ್ಕೋಡ ಕ್ರಾಸ್ ಬಳಿ ಪ್ರವಾಹದ ಸಂದರ್ಭದಲ್ಲಿ ಸಂಪರ್ಕ ಕಡಿತವಾಗುವ ಸಮಸ್ಯೆಯನ್ನು ಪ್ರಸ್ತಾಪಿಸಿದ ಅವರು, ಸೇತುವೆ ನಿರ್ಮಾಣಕ್ಕೆ ಸುಮಾರು ?15 ಕೋಟಿ ಅಂದಾಜಿನ ಪ್ರಸ್ತಾವನೆ ಕುರಿತು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಚರ್ಚಿಸಲಾಗಿದ್ದು, ಶೀಘ್ರ ಮಂಜೂರಾತಿ ದೊರೆಯುವ ಭರವಸೆ ಇದೆ ಎಂದು ತಿಳಿಸಿದರು.
ಗ್ರಾಮದ ವೈಯಕ್ತಿಕ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಸದಾ ತಮ್ಮೊಂದಿಗೆ ಇರುವುದಾಗಿ ಆನಂದ ನ್ಯಾಮಗೌಡ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕುಮಾರ ಆಲಗೂರ ಹಾಗೂ ಅರ್ಜುನ ದಳವಾಯಿ ಮಾತನಾಡಿದರು. ನರಸಪ್ಪ ಕಂಬಾಗಿ ಸ್ವಾಗತಿಸಿದರು. ಸುನೀಲ ಟಕ್ಕೋಡ ನಿರೂಪಿಸಿ ವಂದಿಸಿದರು.
ಅನಿಲ್ ಜಾಧವ, ಸುಭಾಷ್ ಪಾಠೋಳಿ, ಅನಿಲ್ ಸಿಂಧೂರ, ಮುನ್ನಾ ಜಮಖಂಡಿ, ಪ್ರಲ್ಹಾದ ಕುಲಕರ್ಣಿ, ಪ್ರವೀಣ್ ಮೇಲಿನಕೇರಿ, ಶಿವನಗೌಡ ಪಾಟೀಲ, ಮಹಾದೇವ ವಾಣಿ, ಬಾಳಪ್ಪ ದರೇಪ್ಪಗೋಳ, ಬಾಹುಬಲಿ ಆಲಗೂರ, ತಮ್ಮಣ್ಣ ನ್ಯಾಮಗೌಡ, ಹಣಮಂತ ಕಾಂಬಳೆ, ಕಾಡಪ್ಪ ಕಲೂತಿ, ರವಿ ಕವಳೆ, ಉಮೇಶ ಟಕ್ಕೋಡ, ಅಮಿತ ಸೂರಗೋಂಡ, ಬಾಳಾಸಾಹೇಬ್ ಹಕ್ಕೇ, ಗವಳಿ, ಅಲ್ಲಗೊಳ, ಬಸವರಾಜ ಮಾಳಿ, ಗಿರೀಶ ನಾಯಕ್, ಶಿವಲಿಂಗ ತೇಲಿ ಸೇರಿದಂತೆ ಗ್ರಾಮಸ್ಥರು, ಮುಖಂಡರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ವೇದಿಕೆಯ ಮೇಲೆ 120 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದರು.
























