Home ಜಿಲ್ಲೆ ಬೆಂಗಳೂರು ಅಳಿವು-ಉಳಿವಿನ ಅಂಚಿನಲ್ಲಿ ವಿಜಯಪುರ ರೇಷ್ಮೆ ಗೂಡಿನ ಮಾರುಕಟ್ಟೆ

ಅಳಿವು-ಉಳಿವಿನ ಅಂಚಿನಲ್ಲಿ ವಿಜಯಪುರ ರೇಷ್ಮೆ ಗೂಡಿನ ಮಾರುಕಟ್ಟೆ

ವಿಜಯಪುರ.ಆ.೨೫- ಒಂದು ಕಾಲದಲ್ಲಿ ಸಾವಿರಾರು ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರಿಗೆ (ರೀಲರ್‌ಗಳಿಗೆ) ಜೀವನಾಧಾರವಾಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಏಕೈಕ ವಿಜಯಪುರ ರೇಷ್ಮೆ ಗೂಡಿನ ಮಾರುಕಟ್ಟೆ ಇಂದು ತನ್ನ ಅಳಿವು-ಉಳಿವಿನ ಕಠಿಣ ಸವಾಲನ್ನು ಎದುರಿಸುತ್ತಿದೆ.


ಹಿಂದೆ ಕೆ.ಜಿ. ರೇಷ್ಮೆ ಗೂಡಿನ ಬೆಲೆ ಕೇವಲ ೧೫೦ ರಿಂದ ೩೦೦ ಇದ್ದರೂ ಸಾವಿರಾರು ರೈತರು ರೇಷ್ಮೆಯನ್ನೇ ಜೀವನಾಧಾರ ಮಾಡಿಕೊಂಡಿದ್ದರು.ಕೊರಟಗೆರೆ, ಮಧುಗಿರಿ ಸೇರಿದಂತೆ ದೂರದ ಊರುಗಳಿಂದ ರೈತರು ಎರಡು ದಿನ ಮುಂಚಿತವಾಗಿಯೇ ಆಗಮಿಸಿ ಜಾಗಕ್ಕಾಗಿ ಕಾಯುತ್ತಿದ್ದ ವೈಭವ ಈ ಮಾರುಕಟ್ಟೆಗಿತ್ತು. ದಿನಕ್ಕೆ ೮೦೦ಕ್ಕೂ ಹೆಚ್ಚು ಲಾಟುಗಳು ಹರಾಜಾಗುತ್ತಿದ್ದ ಜಾಗದಲ್ಲಿ, ಇಂದು ಕೇವಲ ೨೫ ರಿಂದ ೫೦ ಲಾಟುಗಳು ಮಾತ್ರ ಬರುತ್ತಿವೆ.ಪ್ರಸ್ತುತ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಬೆಲೆ ಕೆ.ಜಿ.ಗೆ ೮೫೦ ಗಡಿ ದಾಟಿದ್ದರೂ ಸ್ಥಳೀಯ ರೈತರು ರೇಷ್ಮೆ ಬೆಳೆಯಲು ವಿಮುಖರಾಗುತ್ತಿರುವುದು ಕಳವಳಕಾರಿಯಾಗಿದೆ.


ಏರ್‌ಪೋರ್ಟ್ ಹಾಗೂ ನಗರೀಕರಣ: ಯಲಿಯೂರು ಮತ್ತು ಸುತ್ತಮುತ್ತಲ ಫಲವತ್ತಾದ ಸಾವಿರಾರು ಎಕರೆ ರೇಷ್ಮೆ ಜಮೀನುಗಳನ್ನು ವಿಮಾನ ನಿಲ್ದಾಣ ಹಾಗೂ ಕೈಗಾರಿಕೆಗಳಿಗೆ ಸರ್ಕಾರ ವಶಪಡಿಸಿಕೊಂಡಿದ್ದರಿಂದ ಹಿಪ್ಪುನೇರಳೆ ಕೃಷಿಗೆ ಜಾಗವಿಲ್ಲದಂತಾಗಿದೆ.ಯುವಜನತೆಯ ವಲಸೆ: ಗ್ರಾಮೀಣ ಯುವಕರು ಕೃಷಿ ಬಿಟ್ಟು ವಿಮಾನ ನಿಲ್ದಾಣ ಹಾಗೂ ನಗರದ ಉದ್ಯೋಗಗಳತ್ತ ಮುಖ ಮಾಡುತ್ತಿದ್ದಾರೆ.


ದ್ರಾಕ್ಷಿ, ದಾಳಿಂಬೆ ಹಾಗೂ ಹೂವಿನ ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕಗಳು ಗಾಳಿಯಲ್ಲಿ ಹರಡಿ ಹಿಪ್ಪುನೇರಳೆ ಸೊಪ್ಪನ್ನು ತಲುಪುತ್ತಿದ್ದು, ಅದನ್ನು ತಿಂದ ರೇಷ್ಮೆ ಹುಳುಗಳು ಸಾಯುತ್ತಿವೆ. ಇದು ನಮಗೆ ದೊಡ್ಡ ಸಮಸ್ಯೆಯಾಗಿದೆ” ಎಂದು ನಾಗನಾಯಕನಹಳ್ಳಿಯ ರೈತ ನಾಗರಾಜಯ್ಯ ಅಳಲು ತೋಡಿಕೊಂಡಿದ್ದಾರೆ.


ಸರ್ಕಾರಿ ಸೌಲಭ್ಯ ಪಡೆದೂ ಸ್ಥಳೀಯ ರೈತರು ಗೂಡನ್ನು ಮಾರುಕಟ್ಟೆಗೆ ತರದೆ ನೇರವಾಗಿ ರೀಲರ್‌ಗಳಿಗೆ ಹಾಗೂ ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ.


ಸ್ಥಳೀಯ ರೇಷ್ಮೆ ಬೆಳೆಗಾರರ ನಿರಾಸಕ್ತಿಯಿಂದಾಗಿ ವಿಜಯಪುರ ಮಾರುಕಟ್ಟೆಯು ಸಂಪೂರ್ಣವಾಗಿ ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಬರುವ ರೇಷ್ಮೆ ಗೂಡಿನ ಮೇಲೆಯೇ ಅವಲಂಬಿತವಾಗಿದೆ.

ಸ್ಥಳೀಯ ರೈತರು ಹೀಗೆಯೇ ಮಾರುಕಟ್ಟೆಯನ್ನು ಅಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಮಾರುಕಟ್ಟೆ ಸಂಪೂರ್ಣ ಬಂದ್ ಆಗುವ ಭೀತಿ ಎದುರಾಗಿದೆ. ರೇಷ್ಮೆ ಕೃಷಿಯನ್ನು ಪ್ರೋತ್ಸಾಹಿಸಲು ಸರ್ಕಾರ ಹಾಗೂ ರೇಷ್ಮೆ ಇಲಾಖೆಯಿಂದ ಹಲವು ಆಕರ್ಷಕ ಯೋಜನೆ ಹಾಗೂ ಅನುದಾನಗಳನ್ನು ನೀಡಲಾಗುತ್ತಿದೆ