Home ಜಿಲ್ಲೆ ಹಿಂದೂಗಳು ಒಂದಾಗಿ ಮತ ಹಾಕಿದ್ದಕ್ಕೆ ವಿಜಯಪುರ ನಗರದ ಅಭಿವೃದ್ಧಿ; ಶಾಸಕ ಯತ್ನಾಳ

ಹಿಂದೂಗಳು ಒಂದಾಗಿ ಮತ ಹಾಕಿದ್ದಕ್ಕೆ ವಿಜಯಪುರ ನಗರದ ಅಭಿವೃದ್ಧಿ; ಶಾಸಕ ಯತ್ನಾಳ

ವಿಜಯಪುರ, ಮೇ. 19:ಹಿಂದೂಗಳು ಒಗ್ಗಟ್ಟಾಗಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದರಿಂದಲೇ ನಾನು ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿ ನಿರೀಕ್ಷೆ ಮೀರಿ ವಿಜಯಪುರ ನಗರವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ. ಹೀಗಾಗಿ ಮುಂಬರುವ ಚುನಾವಣೆ ದೃಷ್ಟಿಯಿಂದ ಪ್ರತಿಯೊಬ್ಬರ ಮನೆಯಲ್ಲಿಯೂ 18 ವರ್ಷ ಮೇಲ್ಪಟ್ಟವರನ್ನು ತಪ್ಪದೆ ಮತದಾರರ ಪಟ್ಟಿಯಲ್ಲಿ ಸೇರಿಸಬೇಕು ಎಂದು ಹೇಳಿದರು.
ವಿಜಯಪುರ ನಗರದ ವಾರ್ಡ್ ನಂ.22 ರ ವಿವೇಕ ನಗರ ಪೂರ್ವ ಭಾಗದ ಈಶ್ವರ ಗುಡಿ ಹತ್ತಿರ ಕನಕದಾಸ ಬಡಾವಣೆ/ವಿವೇಕ ನಗರ ಪೂರ್ವ ಭಾಗದಲ್ಲಿ ಸನ್ 2025-26ನೇ ಸಾಲಿನ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಯೋಜನೆಯಡಿಯಲ್ಲಿ ರೂ.1.36 ಕೋಟಿ ಅನುದಾನದಲ್ಲಿ ಕೈಗೊಳ್ಳಲಾಗುವ ವಿವಿಧ ಉದ್ಯಾನಗಳ ಅಭಿವೃದ್ಧಿ ಮತ್ತು ಹೈಮಾಸ್ಟ್ ಗಳ ಅಳವಡಿಕೆ ಕಾಮಗಾರಿಗೆ ಭೂಮಿಪೂಜೆ, ನಂತರ ವಾರ್ಡ್ ನಂ.21ರಲ್ಲಿ ಸನ್ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರಿಸಲಾದ ರೂ.15 ಲಕ್ಷ ಅನುದಾನದಲ್ಲಿ ಗುರುಪಾದೇಶ್ವರ ನಗರದ ಶ್ರೀ ಯೋಗಿಶ್ವರ ಯಾಜÐವಲ್ಕ ಋಷಿಗಳ ಮಂದಿರ ನಿರ್ಮಾಣ ಕಾಮಗಾರಿಗೆ ಹಾಗೂ ಕುಮುದಾ ನಗರದಲ್ಲಿ ರೂ.20 ಲಕ್ಷ ಮೊತ್ತದಲ್ಲಿ ಸವಿತಾ ಸಮಾಜ ಸಂಘದ ಸಮುದಾಯ ಭವನ ಕಟ್ಟಣ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಗರದಲ್ಲಿ ರಸ್ತೆ, ಒಳಚರಂಡಿ ನಿರ್ಮಾಣದ ಜೊತೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಅತ್ಯುತ್ತಮ ಗಾಳಿ ಬೀಸುವ ನಗರಗಳ ಪಟ್ಟಿಯಲ್ಲಿ ದೇಶದಲ್ಲೇ ವಿಜಯಪುರ ನಗರ 4ನೇ ಸ್ಥಾನದಲ್ಲಿದೆ. ಈ ಮೂಲಕ ವಿಜಯಪುರ ನಗರವು ದೇಶದ ಗಮನಸೆಳೆದಿದೆ. ಜೊತೆಗೆ ಎಲ್ಲ ಸಮುದಾಯಗಳ ಸಮುದಾಯ ಭವನಗಳ ನಿರ್ಮಾಣ, ದೇವಸ್ಥಾನಗಳ ಜೋರ್ಣೋದ್ಧಾರ, ಶಾಲಾ ಕೊಠಡಿಗಳನ್ನು ಸಹ ನಿರ್ಮಿಸಲಾಗಿದೆ. ನಗರದಲ್ಲಿ ಶಾಂತಿ ನೆಲೆಸುವಂತೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಮಹಿಳೆಯರು ಯಾರ ಭಯವಿಲ್ಲದೆ ತರಕಾರಿ ಖರೀದಿಸುವ ಜೊತೆಗೆ ನಿರ್ಭಯವಾಗಿ ನಗರದಲ್ಲಿ ಸಂಚರಿಸುತ್ತಾರೆ ಎಂದು ತಿಳಿಸಿದರು.
ಪ್ರತಿ ಭೂಮಿಪೂಜೆ ಬಳಿಕ ನೆರೆದ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು. ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಮಲ್ಲಿಕಾರ್ಜುನ (ಕುಮಾರ) ಗಡಗಿ, ಮುಖಂಡರಾದ ಎ.ಡಿ. ದೇಶಪಾಂಡೆ, ಸತೀಶ ಕುಲಕರ್ಣಿ, ಶಂಕರ ಭಟ್ ಅಗ್ನಿಹೋತ್ರಿ, ಲಕ್ಷ್ಮೀಕಾಂತ ಕುಲಕರ್ಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.