ವಿಜಯಪುರ ಬಂದ್: ಮಿಶ್ರ ಪ್ರತಿಕ್ರಿಯೆ

ವಿಜಯಪುರ, ಅ. 16: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದಿರುವ ಆರೋಪಿ ಬಂಧನಕ್ಕೆ ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಗುರುವಾರ ನೀಡಿದ್ದ ವಿಜಯಪುರ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಬಂದ್ ಕರೆ ನೀಡಲಾಗಿದ್ದು, ನಗರ ಹಾಗೂ ಹೊರ ಜಿಲ್ಲೆಗಳಿಗೆ ಸಂಚರಿಸುವ ಸಾರಿಗೆ ಸಂಸ್ಥೆಗಳ ಬಸ್ ಗಳು ಓಡಾಡಲಿಲ್ಲ. ಕೇಂದ್ರ ಬಸ್ ನಿಲ್ದಾಣ ಹಾಗೂ ಸ್ಯಾಟಲೈಟ್ ಬಸ್ ನಿಲ್ದಾಣಗಳಲ್ಲಿ ಬಸ್ ಇಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.
ನಗರದಲ್ಲಿನ ಬಹುತೇಕ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆ 11 ಗಂಟೆವರೆಗೆ ಅರ್ಧಬಾಗಿಲು ತೆಗೆದು ವ್ಯಾಪಾರ ವಹಿವಾಟು ನಡೆಸಿದವು. ಪ್ರತಿಭಟನೆಕಾರರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಿದ್ದಂತೆಯೇ ಎಲ್ಲ ಅಂಗಡಿ ಮುಂಗಟ್ಟಗಳನ್ನು ಅಂಗಡಿ ಮಾಲೀಕರು ಸಂಪೂರ್ಣವಾಗಿ ಬಂದ್ ಮಾಡಿದರು. ಪೆಟ್ರೋಲ್ ಪಂಪ್ ಕೂಡ ಬಂದ್ ಆಗಿದ್ದವು. ಬೆಳಿಗ್ಗೆ 8 ರಿಂದ 11 ಗಂಟೆವರೆಗೆವಾಹನ ಸಂಚಾರ ವಿರಳವಾಗಿತ್ತು. ನಂತರ ಆಟೋ ಸಂಚಾರ ಕೂಡ ಸಂಪೂರ್ಣವಾಗಿ ಸ್ಥಗಿತಗೊಂಡಿತು.
ಬಸ್ ಗಳಿಲ್ಲದೆ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಪರದಾಡಬೇಕಾಯಿತು. ವಿಜಯಪುರ ನಗರದ ಜನತೆ ಆಟೋ ಸಂಚಾರ, ಬಸ್ ಸಂಚಾರ ಇಲ್ಲದೆ ದೈನಂದಿನಂತೆ ಮಾರುಕಟ್ಟೆಗೆ ಬರಲು ಆಗಲಿಲ್ಲ.
ಅವಶ್ಯಕ ವಸ್ತುಗಳು, ಔಷಧ ಹಾಗೂ ಆರೋಗ್ಯ ಸೇರಿದಂತೆ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಬಹುತೇಕ ಬಂದ್ ಆಗಿದ್ದವು. ಹೋಟೆಲ್ ಗಳು ಬಂದ್ ಆಗಿದ್ದರಿಂದ
ಚಹಾ, ನೀರಿಗೆ ಸಹ ಜನರು ಪರದಾಡಬೇಕಾಯಿತು.
ಆಟೋಗಳ ಸಂಚಾರವನ್ನು ಬಂದ್ ಮಾಡುವಂತೆ ಧ್ವನಿವರ್ಧಕ ಮೂಲಕ ಆಟೋ ಚಾಲಕರಿಗೆ ಎಚ್ಚರಿಸಲಾಯಿತು.
ಬೃಹತ್ ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು.

ಬಿಗಿಬಂದೋಬಸ್ತ್:
ವಿಜಯಪುರ ಬಂದ್‍ಗೆ ಸಂಬಂಧಿಸಿದಂತೆ ಪೆÇಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ನಗರದ ತುಂಬೆಲ್ಲ ಪೆÇಲೀಸರು ಗಸ್ತುತಿರುಗುತ್ತಿರುವುದು ಸಾಮಾನ್ಯವಾಗಿ ಕಂಡು ಬಂತು. ಕೆಲ ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚಿನ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು.