Home ಜಿಲ್ಲೆ ಕಲಬುರಗಿ ಹಿರಿಯ ಪತ್ರಿಕಾ ವಿತರಕ ಗುರುರಾಜ ಗುಡ್ಡಾ, ಶಶಿಕಾಂತ ಪಾಟೀಲ್‍ಗೆ ಸತ್ಕಾರ

ಹಿರಿಯ ಪತ್ರಿಕಾ ವಿತರಕ ಗುರುರಾಜ ಗುಡ್ಡಾ, ಶಶಿಕಾಂತ ಪಾಟೀಲ್‍ಗೆ ಸತ್ಕಾರ

ಕಲಬುರಗಿ,ಸೆ.5-ಸರ್ವ ವಿಷಯಗಳ ಆಗರ, ಜ್ಞಾನದ ನಿಧಿಗಳಾದ ಪತ್ರಿಕೆಗಳನ್ನು ಮಳೆ, ಚಳಿ, ಬಿಸಲು, ಗಾಳಿ, ಹಗಲು, ರಾತ್ರಿಯನ್ನದೇ, ಓದುಗರ ಮನೆ ಬಾಗಿಲಿಗೆ ನೇರವಾಗಿ ತಲುಪಿಸುವ ಪತ್ರಿಕಾ ವಿತರಕರು ಜ್ಞಾನ ಪ್ರಸಾರಕರಂತೆ ಕಾರ್ಯನಿರ್ವಹಿಸುತ್ತಾರೆ ಎಂದು ಹಿರಿಯ ಪತ್ರಿಕಾ ವಿತರಕ ಗುರುರಾಜ ಗುಡ್ಡಾ ಅಭಿಮತಪಟ್ಟರು.
ನಗರದ ಖಾದ್ರಿ ಚೌಕ್‍ನಲ್ಲಿನ ‘ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ವಿಶ್ವ ಪತ್ರಿಕಾ ವಿತರಕರ ದಿನಾಚರಣೆ’ಯಲ್ಲಿ ಗೌರವವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಪತ್ರಿಕೆ ವಿತರಕರಿಗೆ ಸಾಮೂಹಿಕ ವಿಮೆ, ಭವಿಷ್ಯ ನಿಧಿ, ಕನಿಷ್ಟ ವೇತನ ನಿಗದಿಗೊಳಿಸುವಿಕೆ, ಇಎಸ್‍ಐ ಸೌಲಭ್ಯ, ಪಿಎಫ್‍ನಂತಹ ಸರ್ಕಾರಿ ಸೌಲಭ್ಯಗಳು ನೀಡುವ ಮೂಲಕ ಸೇವೆ, ಜೀವನ ಭದ್ರತೆಯನ್ನು ಒದಗಿಸಬೇಕು. ಪತ್ರಿಕಾ ವಿತರಣೆಯ ಕಾರ್ಯ ಕೀಳೆಂದು ಭಾವಿಸಬಾರದು. ಇದು ಬೆಳೆಗ್ಗೆ ಅಥವಾ ಸಾಯಂಕಾಲ ಅರೆಕಾಲಿಕ ಕೆಲಸವಾಗಿದ್ದು, ಇದರಿಂದ ನಮ್ಮ ಕೆಲಸದ ಜೊತೆಗೆ ಮಾಡಬಹುದಾಗಿದೆ. ಇದರಿಂದ ಆರ್ಥಿಕ ಸಹಾಯವಾಗುತ್ತದೆ. ನಾನು ಕಳೆದ 23 ವರ್ಷಗಳಿಂದ ಇದೇ ಕಾರ್ಯವನ್ನು ಮಾಡುತ್ತಿದ್ದೇನೆ. ಈ ಕಾರ್ಯದ ಬಗ್ಗೆ ನನಗೆ ತೃಪ್ತಿಯಿದೆ ಎಂದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಪತ್ರಿಕಾ ವಿತರಣಾ ಕಾರ್ಯ ಲಾಭದ ಉದ್ದೇಶದಿಂದಲ್ಲ. ಅದರಲ್ಲಿ ಸಮಾಜ ಸೇವಾ ಮನೋಭಾವನೆ ಅಡಗಿದೆ. ವಿತರಕರು ಪತ್ರಿಕೆಯ ಸೇನಾನಿಗಳು. ಜ್ಞಾನ ಪ್ರಸರಣ ಕಾರ್ಯ ಮಾಡುತ್ತಾರೆ. ತಮ್ಮ ವೈಯಕ್ತಿಕ ಜೀವನವನ್ನು ಬದಿಗೊತ್ತಿ ದಿನಾಲೂ ಜ್ಞಾನ ದಾಸೋಹ ಕಾರ್ಯ ಮಾಡುತ್ತಾರೆ. ಅವರ ಕೆಲಸಕ್ಕೆ ಸೂಕ್ತ ಗೌರವ ದೊರೆಯಬೇಕು. ಅವರಿಗೆ ದೊರೆಯಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿ ಪತ್ರಿಕಾ ವಿತರಕರ ಜೀವನಕ್ಕೆ ಭದ್ರತೆಯನ್ನು ಒದಗಿಸಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕ ಶಶಿಕಾಂತ ಪಾಟೀಲ್, ಸಂಸ್ಥೆಯ ಅಧ್ಯಕ್ಷ ಅಸಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಶಿಕ್ಷಕಿಯರಾದ ಮುಸ್ಕಾನ್ ಶೇಖ್, ರುಕ್ಸಾನಾ ಪಟೇಲ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.