
ತುಮಕೂರು, ಡಿ. ೨೬- ಅಂತರ್ಜಾಲದಲ್ಲಿರುವುದೆಲ್ಲ ಸತ್ಯವಲ್ಲ. ಯುವ ಬರಹಗಾರರರು ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡ ಬಳಿಕವೇ ಅಲ್ಲಿನ ಮಾಹಿತಿಯನ್ನು ತಮ್ಮ ಲೇಖನಗಳಲ್ಲಿ ಬಳಸಿಕೊಳ್ಳಬೇಕು ಎಂದು ಅಂಕಣಕಾರ, ಪತ್ರಕರ್ತ ಎ. ಆರ್.ಮಣಿಕಾಂತ್ ಹೇಳಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಏರ್ಪಡಿಸಿದ್ದ ‘ಅಂಕಣ-ನುಡಿಚಿತ್ರ ಬರವಣಿಗೆ’ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾಧ್ಯಮಗಳಲ್ಲಿ ಅಭಿವ್ಯಕ್ತಿಸಬೇಕು ಎಂಬ ಹಂಬಲ ಯುವಕರಿಗೆ ಇದೆ. ಆದರೆ ಅದಕ್ಕೆ ಬೇಕಾದ ಸಿದ್ಧತೆ ಕಡಿಮೆ.ವಿದ್ಯಾರ್ಥಿಗಳು ವಿಸ್ತಾರವಾದ ಓದಿಗೆ ತಮ್ಮನ್ನು ತೆರೆದುಕೊಳ್ಳಬೇಕು. ಕೃತಕ ಬುದ್ಧಿಮತ್ತೆ ಹಾಗೂ ಅಂತರ್ಜಾಲದ ಮಾಹಿತಿ ಆಧರಿಸಿ ಬರೆಯುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ ಮಾಹಿತಿಯನ್ನು ಪರಿಶೀಲಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಅಂಕಣಕಾರನಿಗೆ ತುಂಬ ತಾಳ್ಮೆ ಇರಬೇಕು. ಒಂದು ವಿಷಯದ ಸಂಪೂರ್ಣ ಮಾಹಿತಿ ಸಿಗುವವರೆಗೆ ಮತ್ತು ಅದು ಆತನಿಗೆ ತೃಪ್ತಿ ತರುವವರೆಗೆ ಪ್ರಕಟಿಸಲು ಅವಸರ ಮಾಡ ಕೂಡದು. ಸೂಕ್ಷ್ಮ ಮನಸ್ಸು, ಕಥೆಗಳನ್ನು ಕೇಳುವ ಸಹೃದಯತೆ ಇರಬೇಕು ಎಂದರು.
ನುಡಿಚಿತ್ರ ಬರವಣಿಗೆ ಕೇವಲ ಪದಗಳ ಆಟವಲ್ಲ, ಅದು ಅನುಭವದ ಅಭಿವ್ಯಕ್ತಿ. ವಿದ್ಯಾರ್ಥಿಗಳು ಒಂದು ಫೋಟೋವನ್ನು ಗಮನಿಸಿ, ಅದರಲ್ಲಿ ಅಡಗಿರುವ ದೃಶ್ಯವನ್ನು ಅನುಭವಿಸಿ, ಆ ಅನುಭವಕ್ಕೆ ಸೂಕ್ತ ಪದಪುಂಜ ಜೋಡಿಸಿದಾಗಲೇ ಪರಿಣಾಮಕಾರಿ ನುಡಿಚಿತ್ರ ರೂಪುಗೊಳ್ಳುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. ದಾಕ್ಷಾಯಿಣಿ ಮಾತನಾಡಿ, ಜೀವನದಲ್ಲಿ ಸೋಲು-ಗೆಲುವು ಸಹಜ, ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಸಣ್ಣ ಸಮಸ್ಯೆಗೂ ಕುಗ್ಗುವ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಇಂತಹ ಸಮಯದಲ್ಲಿ ಧೈರ್ಯ ಕಳೆದುಕೊಳ್ಳದೆ ಮುಂದುವರಿಯಬೇಕು. ಹಣ ಸಂಪಾದನೆಗಾಗಿ ಅಗ್ಗದ ಮಾರ್ಗಗಳನ್ನು ಅನುಸರಿಸದೇ ಶ್ರಮದ ಹಾದಿಯನ್ನು ಆಯ್ಕೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿಭಾಗದ ಮುಖ್ಯಸ್ಥ ಸಿಬಂತಿ ಪದ್ಮನಾಭ ಮಾತನಾಡಿ, ಮಣಿಕಾಂತ್ ಕನ್ನಡ ಪುಸ್ತಕೋದ್ಯಮದಲ್ಲಿ ಹೊಸತೊಂದು ದಾಖಲೆ ಸೃಷ್ಟಿಸಿದ್ದಾರೆ. ಅವರ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕ ಎರಡು ಲಕ್ಷ ಪ್ರತಿಗಳು ಮಾರಾಟವಾಗಿವೆ. ಮಣಿಕಾಂತ್ ತಮ್ಮ ಅಂಕಣಗಳಲ್ಲಿ ಯಶೋಗಾಥೆಗಳನ್ನು ಬರೆಯುವ ಮೂಲಕ ಸಾವಿರಾರು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ದರ್ಶನ್, ಅಜಯ್, ಭೂಮಿಕಾ ಶಂಕರ್, ಶ್ರೀವಾಸ್ ಮಣಿಕಾಂತ್ ಅವರೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಡಾ. ಎಸ್. ಪಿ.ಪದ್ಮಪ್ರಸಾದ್, ಪತ್ರಿಕೋದ್ಯಮ ಉಪನ್ಯಾಸಕರಾದ ಡಾ.ಗಿರಿಜಮ್ಮ ಜಿ., ಡಾ.ಪೃಥ್ವಿರಾಜ ಟಿ., ಡಾ. ಸುಲೋಚನ ಜಿ.ಎಸ್., ಪ್ರವೀಣ್‌ಕುಮಾರೆನ್., ಚನ್ನಬಸವ ಎಂ., ವಿಷ್ಣುಧರನ್, ವಿಶಾಲ್ ಮಯೂರ್ ಮತ್ತಿತರರು ಭಾಗವಹಿಸಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.




























