
ವಿಜಯಪುರ,ನ .೪- ವಿಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮದಲ್ಲಿ ನಿವೇಶನರಹಿತರಿಗಾಗಿ ಮೀಸಲಿರಿಸಲಾಗಿರುವ ೭ ಎಕರೆ ಭೂಮಿಯ ಹಂಚಿಕೆ ಪ್ರಕ್ರಿಯೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ವಾಸಂತಿ ಅಮರ್ ಅವರು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ ಮಾತನಾಡಿದ ಅವರು, ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ, ಸರಕಾರದ ಮಾರ್ಗಸೂಚಿ ಹಾಗೂ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನಿಜವಾದ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು. ಗ್ರಾಮದಲ್ಲಿ ಯಾರೊಬ್ಬರೂ ನಿವೇಶನರಹಿತರಾಗಿ ಉಳಿಯದಂತೆ ನೋಡಿಕೊಳ್ಳಲು ಅಗತ್ಯ ದಾಖಲೆಗಳನ್ನು ಸಮರ್ಪಕವಾಗಿ ಸಂಗ್ರಹಿಸಿ ನ್ಯಾಯಯುತವಾಗಿ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ತಾಕೀತು ಮಾಡಿದರು.
ಇದೇ ವೇಳೆ, ಸಮೀಪದ ತಿಮ್ಮಹಳ್ಳಿ ಗ್ರಾಮದಲ್ಲಿ ನಿವೇಶನಗಳಿಗಾಗಿ ಮೀಸಲಿಟ್ಟಿರುವ ೩ ಎಕರೆ ಹಾಗೂ ಸ್ಮಶಾನಕ್ಕಾಗಿ ನಿಗದಿಪಡಿಸಿರುವ ೧ ಎಕರೆ ಭೂಮಿಯನ್ನು ವೀಕ್ಷಿಸಿ, ಸ್ಥಳೀಯ ಅಧಿಕಾರಿಗಳಿಂದ ಜಮೀನಿನ ಬಳಕೆ ಹಾಗೂ ಹಂಚಿಕೆ ಕುರಿತು ಸಮಗ್ರ ಮಾಹಿತಿ ಪಡೆದರು.
ಈ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು, ಕಾರ್ಯಪಾಲಕ ಅಭಿಯಂತರ ಸುನೀಲ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾರುತಿ ಹಾಗೂ ಸ್ಥಳೀಯ ಮುಖಂಡರಾದ ಹಾರೋಹಳ್ಳಿ ರಘು, ಪ್ರಕಾಶ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.























