
ಬೆಂಗಳೂರು:ಫೆ. ೮- ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಜೀವಿತ ಪ್ರಮಾಣಪತ್ರ ನೀಡುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಪರಿಶೀಲಿಸಿ, ಕೂಡಲೇ ಕ್ರಮ ವಹಿಸುವಂತೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿರುವ ಸಿಎಂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಈ ಬಗ್ಗೆ ಪರಿಶೀಲನೆ ಮಾಡಿ, ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಆ ಮೂಲಕ ಸರ್ಕಾರವು ಅರ್ಹರಿಗೆ ಮಾತ್ರ ಗೃಹಲಕ್ಷ್ಮೀ ಹಣ ಪಾವತಿ ಖಚಿತಪಡಿಸಲು ಮುಂದಾಗಿದೆ.
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಲ್ಲಿ ಮರಣ ಹೊಂದಿರುವವರ ಮಾಹಿತಿಯನ್ನು ಕಾಲ-ಕಾಲಕ್ಕೆ ಪರಿಶೀಲನೆ ನಡೆಸಿ, ಮರಣ ಹೊಂದಿರುವ ಫಲಾನುಭವಿಗಳಗೆ ಧನಸಹಾಯ ಪಾವತಿಯಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲು ಸರ್ಕಾರ ಯೋಚಿಸಿದೆ. ಗೃಹಲಕ್ಷ್ಮೀ ಯೋಜನೆಯಡಿ ಪಾವತಿಯಾಗುವ ಮೊತ್ತವು ಮರಣ ಹೊಂದಿರುವ ಫಲಾನುಭವಿಗಳಿಗೆ ಕೆಲವು ಕಡೆ ಪಾವತಿಯಾಗುವುದನ್ನು ತಡೆಗಟ್ಟುವುದು ಅವಶ್ಯವಾಗಿದೆ. ಇದರಿಂದ ಸರ್ಕಾರ ಪಾವತಿಸುವ ಮೊತ್ತವು ಸದ್ವಿನಿಯೋಗವಾಗಲು ಹಾಗೂ ಸರ್ಕಾರದ ಹಣ ಇತರೆ ಅರ್ಹ ಫಲಾನುಭವಿಗಳಿಗೆ ವಿತರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರವು ಕ್ರಮ ವಹಿಸಬೇಕು ಎಂದು ಎಂಎಲ್‌ಸಿ ದಿನೇಶ್ ಗೂಳಿಗೌಡ ಮನವಿ ಮಾಡಿದ್ದರು.
ಮನವಿ ಪತ್ರದಲ್ಲೇನಿತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ರಾಜ್ಯಾದ್ಯಂತ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಈ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆಯಡಿ ೨೦೨೩ರ ಜೂನ್ ತಿಂಗಳಿನಿಂದ ಸರ್ಕಾರದ ಆದೇಶದನ್ವಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮಾಸಿಕ ೨ ಸಾವಿರ ರೂ. ಪಾವತಿಸಲಾಗುತ್ತಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಯೋಜನೆಯ ಫಲಾನುಭವಿ ಆಗಿರುತ್ತಾರೆ. ಗೃಹಲಕ್ಷ್ಮೀ ಯೋಜನೆಯಡಿ ೧,೨೪,೧೨,೫೪೩ ಅರ್ಹ ಫಲಾನುಭವಿಗಳಿಗೆ ಈವರೆಗೂ ಸುಮಾರು ೫೭,೩೦೦ ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ಪಾವತಿ ಮಾಡಲಾಗಿದೆ ಎಂದಿದ್ದಾರೆ.
ನಿವೃತ್ತ ಸರ್ಕಾರಿ ನೌಕರರುಗಳಿಗೆ ಪಾವತಿಸುವ ಪಿಂಚಣಿ ಮೊತ್ತವನ್ನು ಪಡೆಯಲು ಅವರು ಪ್ರತಿ ವರ್ಷ ಸಂಬಂಧಪಟ್ಟ ಬ್ಯಾಂಕ್?ಗಳಿಗೆ ತಮ್ಮ ಜೀವಿತ ಪ್ರಮಾಣ ಸಲ್ಲಿಸುವುದನ್ನು ಕಡ್ಡಾಯಗೊಳಿಸಿರುವ ಮಾದರಿಯಲ್ಲಿ, ಗೃಹಲಕ್ಷ್ಮೀ ಯೋಜನೆಯಡಿಯ ಅರ್ಹ ಫಲಾನುಭವಿಗಳು ಸಹ ಪ್ರತಿ ವರ್ಷ ಸಂಬಂಧಪಟ್ಟ ಬ್ಯಾಂಕ್?ಗಳಿಗೆ ತಮ್ಮ ಜೀವಿತ ಪ್ರಮಾಣ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಹಾಗೂ ಇತರೆ ಮಾರ್ಗೋಪಾಯಗಳ ಬಗ್ಗೆ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ಗೂಳಿಗೌಡ ಅವರು ಮನವಿ ಮಾಡಿದ್ದರು.






























