ವೇಣುಗೋಪಾಲಸ್ವಾಮಿ ಬಾವಿ ಸಿಹಿ ನೀರಿಗೆ ಔಷಧಿಗುಣ

ಮುಳಬಾಗಿಲು,ಅ,೨೮-ನಗರದ ಅಂಜನಾದ್ರಿ ಬೆಟ್ಟಡ ತಪ್ಪಲಿನ ಶ್ರೀ ವೇಣು ಗೋಪಾಲಸ್ವಾಮಿ ದೇವಾಲಯದ ಪಕ್ಕದ ಶ್ರೀ ವೇಣುಗೋಪಾಲಸ್ವಾಮಿ ಬಾವಿ ನೀರು ತುಂಬ ಸಿಹಿಯಾಗಿದ್ದು ಔಷದಿ ಗುಣ ಹೊಂದಿರುವುದರಿಂದ ಜನರನ್ನು ಆಕರ್ಷಿಸುತ್ತಿದೆ.


ಸದರಿ ನೀರಿಗೆ ತುಂಬ ಬೇಡಿಕೆ ಇದ್ದು ಬೆಳಗ್ಗೆ ೩ ಗಂಟೆಯಿಂದಲೇ ಜನ ನೀರಿಗಾಗಿ ಸರತಿ ಸಾಲಿನಲ್ಲಿ ನಿಂತು ಬಿಂದಿಗೆಗಳಲ್ಲಿ ತುಂಬಿಸಿಕೊಂಡು ಹೋಗುವುದು ಮಾಮೂಲಿಯಾಗಿದೆ.


ಶ್ರೀ ಆಂಜನಾದ್ರಿ ಬೆಟ್ಟಕ್ಕೆ ತನ್ನದೇ ಆದ ಇತಿಹಾಸವಿದೆ, ರಾಮಾಯಣ ಅವಧಿಯಲ್ಲಿ ರಾಕ್ಷಸರು ಮತ್ತು ರಾಮ, ಲಕ್ಷ್ಮಣ, ಆಂಜನೇಯಸ್ವಾಮಿ, ವಾನರ ಮದ್ಯ ಯುದ್ದ ನಡೆದಾಗ ಲಕ್ಷ್ಮಣ ಯುದ್ದದಲ್ಲಿ ಮೂರ್ಚೆ ಹೋಗಿ ಕೆಳಗೆ ಬಿದ್ದಾಗ ಶ್ರೀ ಆಂಜನೇಯಸ್ವಾಮಿ ಹಿಮಾಲಯ ಪರ್ವತಗಳಲ್ಲಿ ಸಂಜೀವಿನಿ ಮೂಲಿಕೆ ತರಲು ತೆರಳಿ ಗಿಡಮೂಲಿಕೆಗಳು ಇರುವ ಬೆಟ್ಟವನ್ನೇ ಒಂದು ಕೈಯಲ್ಲಿ ಎತ್ತಿಕೊಂಡು ಬರುವಾಗ ಬೆಟ್ಟದ ಸ್ವಲ್ಪ ಭಾಗ ಮೂಡಲಬಾಗಿಲಿನಲ್ಲಿ ಬಿದ್ದಿರುವುದಕ್ಕೆ ಅಂಜನಾದ್ರಿ ಬೆಟ್ಟ ಎಂದೇ ಕರೆಯಕಲ್ಪಡುತ್ತಿದೆ.


ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಶಿಥಿಲಾವಸ್ಥೆ ತಲುಪಿ ಮೂಲೆಗುಂಪಾಗಿದ್ದು ಪಕ್ಕದಲ್ಲೇ ಇರುವ ಬಾವಿಗೆ ಅಂಜನಾದ್ರಿ ಬೆಟ್ಟದಿಂದ ಗಿಡಮೂಲಿಕೆಗಳು ಇರುವ ನೀರು ಸರಾಗವಾಗಿ ಬಂದು ಬಾವಿಗೆ ಸೇರುತ್ತದೆ ಎಂಬುವುದು ಈ ಭಾಗದ ಹಿರಿಯರ ಮಾತಾಗಿದೆ. ಅನೇಕ ಕಾಯಿಲೆಗಳಿಗೆ ಈ ನೀರು ಕುಡಿದರೆ ವಾಸಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಇರುವುದರಿಂದ ಈ ಬಾವಿ ಖ್ಯಾತಿಗೊಂಡಿದೆ.


ಮಳೆ ಬಂದರೆ ಜನ ಈ ಬಾವಿ ನೀರಿಗೆ ಹೋಗುವಾಗ ಸರಿಯಾದ ರಸ್ತೆ ಇಲ್ಲದೆ ಕೆಸರು ರಸ್ತೆಯಲ್ಲೇ ಸಂಚರಿಸಬೇಕಾಗಿದೆ.ಸಂಬಂಧಿಸಿದ ಇಲಾಖಾಧಿಕಾರಿಗಳು ಸುಸಜ್ಜಿತವಾದ ರಸ್ತೆ ನಿರ್ಮಿಸಿ ಶ್ರೀ ವೇಣುಗೋಪಾಲಸ್ವಾಮಿ ಬಾವಿಯನ್ನು ಮತ್ತು ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಲು ಮುಂದಾಗಬೇಕಾಗಿದೆ.