ಮಂಗಳೂರು, ಡಿ.೩-ಅಧಿಕಾರ ಹಂಚಿಕೆ ಸಂಬಂಧ ಕಾಂಗ್ರೆಸ್‌ನಲ್ಲಿ ಇದೀಗ ಉಪಹಾರ ಸಭೆಯ ನಂತರ ಬೋಜನ ಕೂಟ ಸಭೆ ಗರಿಗೆದರಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಗಳೂರಿನ ಕಾವೇರಿ ಗೆಸ್ಟ್ ಹೌಸ್‌ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಜೊತೆ ಭೋಜನ ಕೂಟ ಸಭೆ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ.
ಒಂದು ವಾರದ ಅವಧಿಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವ್ಯವಹಾರದಲ್ಲಿ ಉಪಹಾರ ಸಭೆ ನಡೆದ ಬೆನ್ನಲ್ಲೇ ಮಂಗಳೂರಿನಲ್ಲಿ ಭೋಜನ ಕೂಟ ಸಭೆ ನಡೆಯಿತು. ಕಾವೇರಿ ಗೆಸ್ಟ್ ಹೌಸ್‌ನಲ್ಲಿ ೧೨ ಹಾಸನಗಳನ್ನ ಹಾಕಲಾಗಿದ್ದು, ಮುಖ್ಯಮಂತ್ರಿ ಹಾಗೂ ವೇಣುಗೋಪಾಲ್ ಅವರೊಂದಿಗೆ ಸಚಿವರು ಪಾಲ್ಗೊಂಡಿದ್ದಾರೆ.
ಉಪಹಾರ ಕೂಟದ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡೆಸಿದ ಮಾತುಕತೆಗಳ ವಿವರಗಳ ಬಗ್ಗೆ, ವೇಣುಗೋಪಾಲ್ ಅವರು ಮಾಹಿತಿ ಸಂಗ್ರಹಿಸಿದರು ಎಂದು ಮೂಲಗಳು ತಿಳಿಸಿವೆ.
ಅಧಿಕಾರ ಹಂಚಿಕೆ, ಸಂಪುಟ ವಿಸ್ತರಣೆ ಕುರಿತಂತೆ ಕಾಂಗ್ರೆಸ್ ಪಾಳಯದಲ್ಲಿ ಬಹಿರಂಗ ಹೇಳಿಕೆಗಳು ನಡೆಯುತ್ತಿದ್ದವು ಆದರೆ ಹೈಕಮಾಂಡ್ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ಗೆ ಸಲಹೆ ನೀಡಿ ಮಾತುಕತೆ ನಡೆಸುವಂತೆ ಸೂಚನೆ ನೀಡಿದ್ದರು. ಉಭಯ ನಾಯಕರು ಉಪಹಾರ ಸಭೆ ಸೇರಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸಿದ್ದರು. ಈ ವಿಷಯದ ಬಗ್ಗೆಯೂ ವೇಣುಗೋಪಾಲ್ ಜೊತೆ ಚರ್ಚಿಸಿ ಅಧಿಕಾರ ಹಂಚಿಕೆ ಗೊಂದಲಕ್ಕೆ ತೆರೆ ಎಳೆಯುವಂತೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಸಿದ್ದು-ಡಿಕೆಶಿ ಪರ ಘೋಷಣೆ
ಅಧಿಕಾರ ಹಂಚಿಕೆ ಕುರಿತಂತೆ ಗೊಂದಲಗಳು ಮುಂದುವರೆದಿರುವಂತೆಯೇ ಮಂಗಳೂರಿನಲ್ಲಿ ಸಿದ್ದರಾಮಯ್ಯ ಅವರು ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಬೇಕೆಂದು ಅವರ ಬೆಂಬಲಿಗರು ಕಾಂಗ್ರೆಸ್ ನಾಯಕ ವೇಣುಗೋಪಾಲ್ ಎದುರೇ ಘೋಷಣೆ ಕೂಗಿದರು.
ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳುತ್ತಿರುವ ಹೊತ್ತಿನಲ್ಲೇ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಪರ ಅವರ ಬೆಂಬಲಿಗರು ಘೋಷಣೆ ಕೂಗಿದ್ದು ಇರಿಸು-ಮುರಿಸಿಗೆ ಕಾರಣವಾಯಿತು.
ಮತ್ತೊಂದೆಡೆ ವಿಮಾಣ ನಿಲ್ದಾಣದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರ “ಡಿಕೆಡಿಕೆ” ಎಂದು ಘೋಷಣೆ ಕೂಗಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ ಮಹಾತ್ಮಗಾಂಧಿ- ನಾರಾಯಣ ಗುರು ಸಂವಾದದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೆ.ಸಿ. ವೇಣುಗೋಪಾಲ್ ಮುಂದೆಯೇ ಕಾರ್ಯಕರ್ತರು ಡಿ.ಕೆ. ಶಿವಕುಮಾರ್ ರವರನ್ನು ಯಾವಾಗ ಮುಖ್ಯಮಂತ್ರಿಯನ್ನಾಗಿ ಮಾಡುತ್ತೀರಿ, ಕಾರಿನ ಸುತ್ತ ಜಮಾಯಿಸಿ ಡಿಕೆಡಿಕೆ ಎಂದು ಜೈಕಾರ ಹಾಕಿದ ಪ್ರಸಂಗ ನಡೆಯಿತು.
ತಕ್ಷಣ ಪೊಲೀಸರು ಕಾರ್ಯಕರ್ತರನ್ನು ಚದುರಿಸಿ ವೇಣುಗೋಪಾಲ್ ಅವರಿಗೆ ದಾರಿ ಮಾಡಿಕೊಡಲು ಹರಸಾಹಸ ಪಟ್ಟರು. ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಆದರೆ ಕಾರ್ಯಕರ್ತರ ಘೋಷಣೆಗೆ ನಕ್ಕು ಸುಮ್ಮನಾದರು.


























