
ಕಲಬುರಗಿ: ಜ.20:ಪ್ರತಿಯೊಬ್ಬರು ವೈಚಾರಿಕತೆ ಅಳವಡಿಸಿಕೊಳ್ಳಬೇಕು, ನಿರಂತರ ಪ್ರಯತ್ನವಾದಿಗಳಾಗಬೇಕು, ಪ್ರಬಲ ಇಚ್ಛಾಶಕ್ತಿ ಸಾಧನೆಗೆ ಪೂರಕ, ಮಾನವೀಯ ಮೌಲ್ಯಗಳು, ಸಾಮಾಜಿಕ ಕಾಳಜಿ, ಸರಳತೆ, ಸಹಜತೆಯಂತಹ ಮುಂತಾದ ಗುಣಗಳು ಅಳವಡಿಸಿಕೊಳ್ಳಬೇಕು, ‘ಮಾನವೀಯತೆಯೇ ಧರ್ಮ, ಜೀವಾತ್ಮರಲ್ಲಿಯೇ ಪರಮಾತ್ಮರನ್ನು ಕಾಣಬೇಕು’ ಎಂಬ ಮಹಾಯೋಗಿ ವೇಮನ್‍ರ ವಚನಗಳು ಸಮಾಜಕ್ಕೆ ದಾರಿ ದೀಪವಾಗಿವೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಮಹಾಯೋಗಿ ವೇಮನ್‍ರ 613ನೇ ಜಯಂತಿ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದ ಅವರು, ವೇಮನ ಅವರು ಜನಸಾಮಾನ್ಯರ ಧ್ವನಿಯಾಗಿ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಬಹುಮುಖ ವ್ಯಕ್ತಿತ್ವದ ಮಹಾನ ಚೇತನವಾಗಿದ್ದಾರೆ. ಸಮಾಜದಲ್ಲಿತುಂಬಿರುವ ಮೌಢ್ಯತೆ, ಕಂದಾಚಾರ, ಅಂಧಶೃದ್ಧೆ, ಅನಿಷ್ಠ ಪದ್ಧತಿಗಳ ವಿರುದ್ದ ಶ್ರಮಿಸಿದ್ದಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ವೇಮನ್‍ರು ಶ್ರೇಷ್ಠ ಸಮಾಜ ಸುಧಾರಕರು, ತತ್ವಜ್ಞಾನಿಗಳು, ಚಿಂತಕರು, ಕವಿಗಳು, ಮಹಾನ ಯೋಗಿಗಳಾಗಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಓಂಕಾರ ವಠಾರ, ಶಿವಶರಣಪ್ಪ ಕುಮಸಿ, ಸೈದಪ್ಪ ಡಾಂಗೆ, ಸಲೀಮ್ ಶಾಹ ಸೇರಿದಂತೆ ಇನ್ನಿತರರಿದ್ದರು.























