Home ಜಿಲ್ಲೆ ಬೆಂಗಳೂರು ತರಕಾರಿ ದರ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ

ತರಕಾರಿ ದರ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ

ಬೆಂಗಳೂರು,ಸೆ.೨೬- ಮಳೆ ಕೊರತೆಯ ಪರಿಣಾಮ ತರಕಾರಿ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಇದೀಗ ಅದರ ಬಿಸಿ ಗ್ರಾಹಕರಿಗೂ ತಟ್ಟಿದೆ.

ಬೆಂಗಳೂರಿನ ಮಾರುಕಟ್ಟೆಗೆ ಸ್ಥಳೀಯವಾಗಿ ಬರುವ ತರಕಾರಿ ಆವಕದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಹಲವು ತರಕಾರಿಗಳ ದರದಲ್ಲಿ ಗಣನೀಯ ಏರಿಕೆಯಾಗಿದೆ.

ನೀರಿನ ಕೊರತೆಯಿಂದ ಬೆಳೆ ಪ್ರಮಾಣ ಮಾತ್ರವಲ್ಲದೆ, ತರಕಾರಿಗಳ ಗಾತ್ರ ಮತ್ತು ಗುಣಮಟ್ಟವೂ ಕುಸಿದಿದ್ದು,ಇದರ ಪರಿಣಾಮವಾಗಿ ಈರುಳ್ಳಿ, ಕ್ಯಾರೆಟ್, ಟೊಮ್ಯಾಟೊ, ನಿಂಬೆಹಣ್ಣು ಸೇರಿದಂತೆ ಹಲವು ತರಕಾರಿಗಳ ಬೆಲೆ ಏರಿಕೆಯಾಗಿದೆ.

ಸಗಟು ಮಾರುಕಟ್ಟೆಯಲ್ಲೇ ದರ ಹೆಚ್ಚಳವಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮತ್ತಷ್ಟು ಹೊರೆ ಬೀಳುತ್ತಿದೆ.ಬೆಂಗಳೂರು ಸುತ್ತಮುತ್ತಲಿನ ಗ್ರಾಮಗಳಿಂದ ಮಾರುಕಟ್ಟೆಗೆ ಬರುವ ಪೂರೈಕೆ ಕಡಿಮೆಯಾಗಿರುವುದೇ ದರ ಏರಿಕೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಸ್ಥಳೀಯ ಪೂರೈಕೆ ಮತ್ತಷ್ಟು ಕುಸಿದರೆ, ಹೊರ ಜಿಲ್ಲೆಗಳ ಮಾರುಕಟ್ಟೆಗಳ ಮೇಲಿನ ಅವಲಂಬನೆ ಹೆಚ್ಚಾಗುವ ಸಾಧ್ಯತೆಯೂ ಇದೆ.

ಇತ್ತ,ಮಳೆ ಕೊರತೆಯಿಂದ ರೈತರು ಕೂಡ ಬೆಳೆ ನಷ್ಟದ ಸಂಕಷ್ಟ ಎದುರಿಸುತ್ತಿದ್ದಾರೆ. ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿರುವ ರೈತರಿಗೆ ಬೆಳೆ ಕೈಕೊಟ್ಟಿರುವುದು ಆತಂಕ ಹೆಚ್ಚಿಸಿದೆ. ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಕಮಿಷನ್ ಹೆಚ್ಚಳವಾಗುತ್ತಿದೆ ಎಂಬ ಆರೋಪವನ್ನೂ ಕೆಲವು ರೈತರು ಮಾಡುತ್ತಿದ್ದಾರೆ.

ಒಟ್ಟಿನಲ್ಲಿ, ಮಳೆ ಕೊರತೆಯಿಂದ ರೈತರಿಗೆ ಬೆಳೆ ನಷ್ಟ, ಗ್ರಾಹಕರಿಗೆ ಬೆಲೆ ಏರಿಕೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ತರಕಾರಿ ದರ ಏರಿಕೆಯ ಪರಿಣಾಮ ಈಗಾಗಲೇ ಅಡುಗೆ ಮನೆಯ ಬಜೆಟ್ ಮೇಲೂ ಒತ್ತಡ ಹೆಚ್ಚಿಸಿದೆ.

ಪ್ರಮುಖ ತರಕಾರಿಗಳ ದರ

ಕ್ಯಾರೆಟ್: ೨೩-೪೫ರಿಂದ ೪೪-೫೯

ಟೊಮ್ಯಾಟೊ: ೮-೨೦ರಿಂದ ೩೧-೪೮

ಈರುಳ್ಳಿ: ೪೦-೪೫ರಿಂದ ೬೧-೭೦

ಬದನೆಕಾಯಿ: ೧೫-೪೦ರಿಂದ ೩೪-೪೫

ಮೆಂತೆ ಸೊಪ್ಪಿನ ಕಟ್ಟು: ೨೦-೩೦ರಿಂದ ೬೦-೮೦

ಕೊತ್ತಂಬರಿ: ೪೦-೫೩ರಿಂದ ೯೦-೧೨೦

ದಪ್ಪ ಮೆಣಸಿನಕಾಯಿ: ೨೯-೫೫ರಿಂದ ೪೫-೬೨