
ಯಾದಗಿರಿ:ಜ.೨೩:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಈಶ್ವರ ಖಂಡ್ರೆ ಅವಿರೋಧವಾಗಿ ಆಯ್ಕೆಯಾಗಿರುವುದು ಸಮಸ್ತ ವೀರಶೈವ-ಲಿಂಗಾಯತ ಸಮಾಜಕ್ಕೆ ಸಂತಸದ ಸಂಗತಿಯಾಗಿದೆ ಎಂದು ಮಹಾಸಭೆ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಅವಿನಾಶ್ ಜಗನ್ನಾಥ್ ಹೇಳಿದರು. ಯಾದಗಿರಿಯಲ್ಲಿ ಹೇಳಿಕೆ ನೀಡಿದ ಅವರು, ದಿವಂಗತ ಶಾಮನೂರ ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಅನುಭವೀ ನಾಯಕ ಈಶ್ವರ ಖಂಡ್ರೆ ಅವರನ್ನು ಮಹಾಸಭೆಯ ಮಹಾಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಅನುಭವದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಜೊತೆಗೆ ಪ್ರಭಾರ ಹೊಣೆ ನಿರ್ವಹಿಸಿದ್ದ ಈಶ್ವರ ಖಂಡ್ರೆ ವೀರಶೈವ-ಲಿಂಗಾಯತ ಸಮಾಜವನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸಮಾಜದ ಒಳಗೊಂಡ ಅಭಿವೃದ್ಧಿ, ಸಮಾನ ನ್ಯಾಯ ಮತ್ತು ಸಮುದಾಯದ ಸರ್ವಾಂಗೀಣ ಏಳಿಗೆಗೆ ಬದ್ಧರಾದ ದೂರದೃಷ್ಟಿಯ ನಾಯಕತ್ವವನ್ನು ಅವರು ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ವೀರಶೈವ-ಲಿಂಗಾಯತ ಒಂದೇ ಎಂಬ ತತ್ವವನ್ನು ಮುಂದುವರಿಸಿಕೊAಡು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಅಭಿವೃದ್ಧಿಗೆ ಶ್ರಮಿಸುವ ನಾಯಕರಾಗಿ ಈಶ್ವರ ಖಂಡ್ರೆ ಹೊರಹೊಮ್ಮಿದ್ದಾರೆ. ಬೀದರ್ ಜಿಲ್ಲೆಯ ಭಾಲ್ಕಿ ಕ್ಷೇತ್ರದ ನಿವಾಸಿಯಾಗಿರುವ ಅವರು ಸಚಿವರಾಗಿ, ಶಾಸಕರಾಗಿ ಹಾಗೂ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಅಪಾರ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ. ಅವರ ತಂದೆ ದಿವಂಗತ ಭೀಮಣ್ಣ ಖಂಡ್ರೆ ೧೨ ವರ್ಷಗಳ ಕಾಲ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಹಿನ್ನೆಲೆಯೂ ಅವರಿಗೆ ಸಂಘಟನೆ ಬಲಪಡಿಸಲು ಸಹಕಾರಿಯಾಗಿದೆ. ಈಶ್ವರ ಖಂಡ್ರೆ ಅವಧಿಯಲ್ಲಿ ಸದಸ್ಯತ್ವ ವೃದ್ಧಿ, ಬೆಂಗಳೂರು ನಗರದಲ್ಲಿ ವೀರಶೈವ ಭವನ ನಿರ್ಮಾಣ, ವಸತಿ ನಿಲಯಗಳ ಸ್ಥಾಪನೆ ಸೇರಿದಂತೆ ಮಹಾಸಭೆ ಇನ್ನಷ್ಟು ಎತ್ತರಕ್ಕೇರುವ ವಿಶ್ವಾಸವಿದೆ ಎಂದು ಅವಿನಾಶ್ ಜಗನ್ನಾಥ್ ಹೇಳಿದರು.






















