
ಬೀದರ್:ಡಿ.15:ಅಂಗನವಾಡಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗೌರವ ಧನ ಹೆಚ್ಚಿಸಿ, ಸೇವಾ ಭದ್ರತೆ ಒದಗಿಸಬೇಕೆಂದು ಜೈಹಿಂದ್ ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ ಅವರು ಸರ್ಕಾರವನ್ನು ಆಗ್ರಹಿಸಿದರು.
ಅವರು ಇಂದು ಜನವಾಡಾ ಗ್ರಾಮದ ಗುರುದ್ವಾರಾ ಮಾಯಿ ಭಾಗೋ ಸಮೀಪದ ಪಾಟೀಲ್ ನಿವಾಸದಲ್ಲಿ, ಅಂಗನವಾಡಿ ಕಾರ್ಯಕರ್ತೆ ಅರುಣಾ ಗುರುನಾಥ ಪಾಟೀಲ್ ಅವರ ವಯೋನಿವೃತ್ತಿ ನಿಮಿತ್ತ ಏರ್ಪಡಿಸಿದ್ದ ಸ್ನೇಹ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸರ್ಕಾರ ಜಾರಿಗೆ ತಂದಿರುವ ಗರ್ಭಿಣಿಯರು ಹಾಗೂ ಬಾಲಂತಿಯರ ಆರೋಗ್ಯ ಮೇಲ್ವಿಚಾರಣೆ, 0 ರಿಂದ 6 ವರ್ಷದ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ, ಅಕ್ಷರಾಭ್ಯಾಸದಂತಹ ಮಹತ್ವದ ಯೋಜನೆಗಳನ್ನು ತಳಮಟ್ಟದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮೇಲಿದೆ ಎಂದು ಅವರು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ತಿಂಗಳಿಗೆ ರೂ.15,000 ಹಾಗೂ ಸಹಾಯಕಿಯರಿಗೆ ರೂ.10,000 ಗೌರವ ಧನ ನೀಡಬೇಕು. ಜೊತೆಗೆ ವಯೋನಿವೃತ್ತಿಯ ಸಮಯದಲ್ಲಿ ರೂ.1,00,000 ಮೊತ್ತದ ನಿವೃತ್ತಿ ಪ್ಯಾಕೇಜ್ (ಒPS) ಒದಗಿಸಿ, ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ವಯೋನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ ಅರುಣಾ ಗುರುನಾಥ ಪಾಟೀಲ್ ಅವರು ಮಾತನಾಡಿ, ಅಂಗನವಾಡಿಯಲ್ಲಿ 30 ವರ್ಷಗಳ ಸೇವೆ ಸಲ್ಲಿಸಿರುವುದು ತೃಪ್ತಿ ಹಾಗೂ ಹೆಮ್ಮೆ ತಂದಿದೆ ಎಂದು ಹೇಳಿದರು.
ಸಸಿಗೆ ನೀರೆರೆದು ಸ್ನೇಹ ಕೂಟವನ್ನು ಉದ್ಘಾಟಿಸಲಾಯಿತು. ಈ ವೇಳೆ ಚಿಟಗುಪ್ಪ ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರಾಜಶೇಖರ ಉಪ್ಪಿನ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಜೀವಿ ಸುಸಲಮ್ಮ, ಸ್ವಾತಂತ್ರ್ಯ ಹೋರಾಟಗಾರ್ತಿ ಸರಸ್ವತಿಬಾಯಿ, ಸಂಜು-ಸುನೀತಾ, ಮಲ್ಲಿಕಾರ್ಜುನ್, ಸಂಗೀತಾ, ಪ್ರಿಯಾಂಕಾ, ಸಾಯಿ ನಾಥ ಪಾಟೀಲ್, ಮಂದಾಕಿನಿ, ಸಂತೋಷ ಕುಮಾರಿ, ಅಮರ, ರೇಖಾ, ಜೈಶ್ರೀ, ಡಾ. ರಾಹುಲ, ನಿವೃತ್ತ ಶಿಕ್ಷಕಿ ಶಾಂತಾಬಾಯಿ ರಾಸೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
























