
ಸಂಜೆವಾಣಿ ವಾರ್ತೆ,
ವಿಜಯಪುರ, ಫೆ.೧ : ಗ್ರಾಮೀಣಾಭಿವೃದ್ಧಿಯ ಸಾಕಾರದೊಂದಿಗೆ ವಿಕಸಿತ ಭಾರತ ಕನಸು ನನಸಾಗಿಸುವ ನಿಟ್ಟಿನಲ್ಲಿ ಮಹತ್ವದ ಬದಲಾವಣೆಯೊಂದಿಗೆ ವಿಬಿಜಿ ರಾಮ್ ಜಿ ಯೋಜನೆಯನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದೆ. ಈ ಬಗ್ಗೆ ಪ್ರತಿಪಕ್ಷಗಳು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದು ನೋವಿನ ಸಂಗತಿ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.
ವಿಜಯಪುರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ವಿಬಿಜಿ ರಾಮ್ ಜಿ ಕುರಿತು ಜನಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನರೇಗಾ ಯೋಜನೆಯನ್ನು ಇನ್ನಷ್ಟೂ ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ. ಉದ್ಯೋಗ ಸೃಜನೆಯ ದಿನಗಳನ್ನು ೧೦೦ ದಿನಗಳಿಂದ ೧೨೫ ದಿನಗಳಿಗೆ ಏರಿಕೆ ಮಾಡುವ ಜೊತೆ ಜೊತೆಗೆ ಯೋಜನೆಯಲ್ಲಿ ಭ್ರಷ್ಟಾಚಾರ ತಡೆಗೆ ವಿವಿಧ ಪಾರದರ್ಶಕ ಕ್ರಮಗಳನ್ನು ಅಳವಡಿಸಿದೆ. ಇದನ್ನು ಸ್ವಾಗತಿಸಬೇಕಾದ ಪ್ರತಿಪಕ್ಷಗಳು ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜನಪ್ರಿಯತೆಯನ್ನು ಸಹಿಸಿಕೊಳ್ಳದ ಕಾಂಗ್ರೆಸ್ ಈ ರೀತಿ ಅಪಪ್ರಚಾರ ಮಾಡುತ್ತಿದೆ. ಗಾಂಧೀಜಿ ಅವರ ಹೆಸರು ಕೈ ಬಿಡಲಾಗಿದೆ ಎಂದು ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದೆ ಎಂದು ಪಟ್ಟಣಶೆಟ್ಟಿ ಅಸಮಾಧಾನ ಹೊರಹಾಕಿದರು.
ಗಾಂಧೀಜಿ ಅವರ ದಿವ್ಯ ಆಶಯದ ಪ್ರತೀಕವೇ ಸೇವೆ. ಈ ಸೇವೆಗೆ ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಆದ್ಯತೆ ನೀಡುವ ಮೂಲಕ ಗಾಂಧೀಜಿ ಆಶಯ ಈಡೇರಿಕೆಗೆ ಸಂಕಲ್ಪ ಮಾಡಿದೆ. ಈ ಯೋಜನೆಗೆ ಪಾರದರ್ಶಕತೆ ತರುವ ದೊಡ್ಡ ಕೆಲಸ ಮಾಡಿದೆ ಎಂದು ಪಟ್ಟಣಶೆಟ್ಟಿ ಹೇಳಿದರು.
ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಮಾತನಾಡಿ, ಉದ್ಯೋಗ ಸೃಷ್ಟಿ ಹಾಗೂ ಗ್ರಾಮೀಣಾಭಿವೃದ್ಧಿ ಈ ಎರಡು ಉದ್ದೇಶಗಳನ್ನು ಒಂದೇ ಯೋಜನೆಯಡಿಯಲ್ಲಿ ಸಾಕಾರಗೊಳಿಸುವ ವಿನೂತನ ಹೆಜ್ಜೆಯನ್ನು ಕೇಂದ್ರದ ಎನ್‌ಡಿಎ ಸರ್ಕಾರ ಇರಿಸಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸುವ ಮೂಲಕ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಬೀಳಲಿದ್ದು ಗ್ರಾಮೀಣಾಭಿವೃದ್ಧಿ ಆಶಯ ಸಾಕಾರಗೊಳ್ಳಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ ತಡೆಗೆ ಈ ಹೊಸ ರೂಪ ನೀಡಲಾಗಿದೆ. ಈ ಯೋಜನೆಯಡಿಯಲ್ಲಿ ಅದರಲ್ಲೂ ಯುಪಿಎ ಅವಧಿಯಲ್ಲಿ ಪಂಜಾಬ್, ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳಲ್ಲಿ ದೊಡ್ಡ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಿತ್ತು. ಆದರೆ ನೂತನ ಯೋಜನೆಯಲ್ಲಿ ಭ್ರಷ್ಟಾಚಾರಕ್ಕೆ ಎಳ್ಳಷ್ಟೂ ಅವಕಾಶವಿಲ್ಲದಂತೆ ಯೋಜನೆ ರೂಪಿಸಲಾಗಿದೆ. ಇದು ಗ್ರಾಮೀಣಾಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಎರಡು ಧ್ಯೇಯಗಳನ್ನು ಸಾಕಾರಗೊಳಿಸುತ್ತಿದೆ ಎಂದು ವಿವರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಪ್ರಭುಗೌಡ ಬಿರಾದಾರ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಮೇಯರ್ ಎಂ.ಎಸ್. ಕರಡಿ, ಸಂಜಯ ಪಾಟೀಲ ಕನಮಡಿ, ಉಮೇಶ ಕಾರಜೋಳ, ಶಿವರುದ್ರ ಬಾಗಲಕೋಟ, ಪಾಪುಸಿಂಗ್ ರಜಪೂತ, ರಾಹುಲ್ ಜಾಧವ, ಮಲ್ಲಿಕಾರ್ಜುನ ದೇವರಮನಿ, ಚಿನ್ನು ಚೆನಗುಂಡಿ, ಅಬ್ದುಲ್ ರಜಾಕ್, ಭಾರತಿ ಭುಯ್ಯಾರ ಸೇರಿದಂತೆ ಪಕ್ಷದ ರಾಜ್ಯ, ಜಿಲ್ಲಾ ವಿವಿಧ ಅಂಗ ಘಟಕಗಳ ಪದಾಧಿಕಾರಿಗಳು, ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು.
























