ವಿಬಿ ಜಿ ರಾಮ ಜಿ ಯೋಜನೆಯಿಂದ ಗ್ರಾಮೀಣ ಜನರ ಆರ್ಥಿಕತೆಗೆ ಕುತ್ತು: ಈಶ್ವರ ಖಂಡ್ರೆ

ಸAಜೆವಾಣಿ ವಾರ್ತೆ
ಬೀದರ್: ಜ.೧೨:ಮನರೇಗಾ ಯೋಜನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ಹಂತ ಹಂತವಾಗಿ ದುರ್ಬಲಗೊಳಿಸಿ, ಇದೀಗ ಸಂಪೂರ್ಣವಾಗಿ ರದ್ದುಪಡಿಸುವ ಉದ್ದೇಶದಿಂದ ವಿಬಿ ಜಿ ರಾಮ್‌ಜೀ ಯೋಜನೆಯನ್ನು ಜಾರಿಗೆ ಮುಂದಾಗಿದೆ. ಗ್ರಾಮೀಣ ಭಾರತದ ಆರ್ಥಿಕತೆಗೆ ನೀಡುತ್ತಿರುವ ಕೊಡಲಿಯೇಟು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದಲ್ಲಿ ರವಿವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಗಾ ದೇಶದ ಕೋಟ್ಯಂತರ ಬಡ, ಕಾರ್ಮಿಕ ಮತ್ತು ಕೃಷಿ ಆಧಾರಿತ ಕುಟುಂಬಗಳಿಗೆ ಉದ್ಯೋಗದ ಖಾತರಿ, ಆಹಾರದ ಭದ್ರತಾ ಯೋಜನೆಯಾಗಿತ್ತು. ಅದನ್ನು ರದ್ದುಗೊಳಿಸಿ ಉದ್ಯೋಗದ ಖಾತರಿಯೂ ಇಲ್ಲದ ಹೊಸ ಯೋಜನೆಯನ್ನು ಜಾರಿಗೆ ತರವ ಮೂಲಕ ಸಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಗಾಂಧಿಜೀ ಹೆಸರಿದ್ದ ಏಕೈಕ ಕಾರಣಕ್ಕಾಗಿ ಸರ್ಕಾರ ಮನರೇಗಾಗೆ ವಿರೋಧಿಸುತ್ತಿದೆ ಎಂದು ತಿಳಿಸಿದರು.
ಅಧಿಕಾರ ವಿಕೇಂದ್ರೀಕರಣ ಹಳ್ಳಿಗಳಿಗೆ ತಲುಪಿಸಬೇಕು, ಆಯಾ ಪಂಚಾಯತಗಳೇ ಆಡಳಿತ ನಡೆಸಬೇಕೆಂಬ ಆಶಯದೊಂದಿಗೆ ೨೦೦೫ರಲ್ಲಿ ಯುಪಿಎ ಸರ್ಕಾರ ಕ್ರಾಂತಿಕರಿ ಯೋಜನೆ ಜಾರಿಗೆ ತಂದಿದೆ. ಗ್ರಾಮೀಣದ ಕಡು ಬಡವರಿಗೆ ನೂರು ದಿನ ಉದ್ಯೋಗ ಸೃಜನೆಯ ಈ ಯೋಜನೆ ಜಗತ್ತಿನ ಮೊದಲ ಕಾರ್ಯಕ್ರಮ ಎನಿಸಿಕೊಂಡಿದೆ. ಆದರೆ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕರಾಳ ಕಾನೂನು ಮೂಲಕ ಬಡವರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಬಡವರು ಆರ್ಥಿಕವಾಗಿ ಸಬಲರಾಗಬಾರದು, ಬಂಡವಾಳಶಾಹಿಗಳ ಜೇಬಿಗೆ ಹಣ ಹೋಗಬೇಕು ಎಂಬ ಉದ್ದೇಶದಿಂದ ಅವರ ಹೊಟ್ಟೆ ಮೇಲೆ ಕಲ್ಲು ಹಾಕುವ ಕೆಲಸ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆ ಶೂನ್ಯವಾಗಿದ್ದು, ಯುಪಿಎ ಸರ್ಕಾರದ ಕಾರ್ಯಕ್ರಮಗಳ ಹೆಸರು ಬದಲಾವಣೆ ಮಾಡಿ ಮರು ಜಾರಿಗೆ ತರುತ್ತಿದೆ. ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಿ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದೆ. ವಿಜಿ ಜಿ ರಾಮ್‌ಜೀ ಯೋಜನೆ ರದ್ದುಗೊಳಿಸಿ, ಮನರೇಗಾ ಮುಂದುವರೆಸಬೇಕು. ಅದಕ್ಕಾಗಿ ದೇಶಾದ್ಯಂತ ಕಾಂಗ್ರೆಸ್ ಜಾಗೃತಿ ಆಂದೋಲನ ನಡೆಸುತ್ತಿದೆ ಎಂದು ಹೇಳಿದರು.
ಈ ರಾಮ್‌ಜೀ ಯೋಜನೆ ದೇಶದಲ್ಲಿ ಮತ್ತೆ ನಿರುದ್ಯೋಗ ಸಮಸ್ಯೆ ಹೆಚ್ಚಿಸಲಿದೆ. ಸರ್ಕಾರ ಸೂಚಿತ ಜಾಗದಲ್ಲಿ, ತಮಗೆ ಬಯಸಿದ ಗ್ರಾ.ಪಂಗಳ ಮೂಲಕ ಕಾಮಗಾರಿಯನ್ನು ನಡೆಸಲು ಅವಕಾಶ ನೀಡಿದೆ. ಇನ್ನೂ ಯೋಜನೆಯಡಿ ಅನುದಾನದ ಪಾಲನ್ನು ಶೇ. ೧೦ ರಿಂದ ಶೇ. ೪೦ಕ್ಕೆ ಹೆಚ್ಚಿಸುವ ಮೂಲಕ ರಾಜ್ಯಗಳ ಮೇಲೆ ಆರ್ಥಿಕ ಹೊರೆಯನ್ನು ಹೊರೆಸಲು ಹೊರಟಿಸಿದೆ ಎಂದು ಹೇಳಿದ ಸಚಿವ ಖಂಡ್ರೆ, ಬಿಜೆಪಿ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮನರೇಗಾ ಬಗ್ಗೆ ತಪ್ಪು ಅಪಪ್ರಚಾರ, ಹೊಸ ಯೋಜನೆ ಬಗ್ಗೆ ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಿಗಮದ ಉಪಾಧ್ಯಕ್ಷ ಸಂಜಯ ಜಾಗಿರದಾರ್, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹಮ್ಮದ್ ಸಮಿ, ಜಾರ್ಜ್ ಫರ್ನಾಂಡಿಸ್ ಸೇರಿದಂತೆ ಮತ್ತಿತರರಿದ್ದರು.