ತುಮಕೂರು, ಅ. ೨೬- ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ತುಮಕೂರು ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿರುವ ಪುನರ್ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಅ. ೨೩ ರಿಂದ ನ. ೭ರ ನಡುವೆ ವಿವಿಧ ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ರೈಲು ಸಂಖ್ಯೆ ೬೬೫೭೨ ತುಮಕೂರು-ಬೆಂಗಳೂರು ಮೆಮು ರೈಲು ಹಾಗೂ ರೈಲು ಸಂಖ್ಯೆ ೬೬೫೭೧ ಬೆಂಗಳೂರು-ತುಮಕೂರು ಮೆಮು ರೈಲು ಸಂಚಾರವು ಅಕ್ಟೋಬರ್ ೨೩ರಿಂದ ೨೫, ಅಕ್ಟೋಬರ್ ೨೮ರಿಂದ ನವೆಂಬರ್ ೧ ಹಾಗೂ ನವೆಂಬರ್ ೪ ರಿಂದ ನವೆಂಬರ್ ೭ರ ನಡುವೆ ಸಂಪೂರ್ಣ ರದ್ದಾಗಿದೆ.
ತುಮಕೂರಿನಿಂದ ಬೆಂಗಳೂರಿಗೆ ನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳು, ನೌಕರರು, ಕಾರ್ಮಿಕರಿಗೆ ಇದರಿಂದ ತೊಂದರೆಯಾಗಲಿದೆ.
ಅಕ್ಟೋಬರ್ ೨೮ ರಿಂದ ನವೆಂಬರ್ ೧ ಹಾಗೂ ನವೆಂಬರ್ ೪ ರಿಂದ ನ. ೭ರ ನಡುವೆ ಸಂಚರಿಸುವ ರೈಲು ಸಂಖ್ಯೆ ೨೦೬೮೯ ಯಶವಂತಪುರ? ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಯಶವಂತಪುರದಿಂದ ನಿಗದಿತ ಸಮಯಕ್ಕಿಂತ ೭೫ ನಿಮಿಷ ತಡವಾಗಿ ಹೊರಡಲಿದೆ.
ಅದೇ ರೀತಿ, ರೈಲು ಸಂಖ್ಯೆ ೧೨೭೨೫ ಬೆಂಗಳೂರು-ಧಾರವಾಡ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ನಿಗದಿತ ಸಮಯಕ್ಕಿಂತ ೩೦ ನಿಮಿಷ ತಡವಾಗಿ ಹೊರಡಲಿದೆ. ಒಟ್ಟು ೧೨ ದಿನಗಳ ಕಾಲ ಈ ವ್ಯತ್ಯಯ ಇರಲಿದೆ.
ಕಾಮಗಾರಿ ನಡೆಯುವಾಗ ಕೆಲವು ರೈಲುಗಳನ್ನು ಮಾರ್ಗ ಮಧ್ಯೆ ೧೫ ರಿಂದ ೪೦ ನಿಮಿಷ ತಡೆದು ನಂತರ ಬಿಡಲಾಗುವುದು.
ರೈಲು ಸಂಖ್ಯೆ ೧೭೩೧೦ ವಾಸ್ಕೋ ಡಿ ಗಾಮಾ- ಯಶವಂತಪುರ ಎಕ್ಸ್‌ಪ್ರೆಸ್ ರೈಲನ್ನು ಅಕ್ಟೋಬರ್ ೨೭ ರಿಂದ ೩೧, ನವೆಂಬರ್ ೩ ರಿಂದ ನ. ೬ ರವರೆಗೆ ಮಾರ್ಗಮಧ್ಯೆ ೧೫ ನಿಮಿಷ ತಡೆದು ಬಿಡಲಾಗುವುದು.
ಅಕ್ಟೋಬರ್ ೨೮ ರಿಂದ ನವೆಂಬರ್ ೧, ನವೆಂಬರ್ ೪ ರಿಂದ ನ.೭ರ ನಡುವೆ ರೈಲು ಸಂಖ್ಯೆ ೬೬೫೬೭ ಕೆಎಸ್‌ಆರ್ ಬೆಂಗಳೂರು- ತುಮಕೂರು ಮೆಮು ರೈಲು ೩೦ ನಿಮಿಷ, ರೈಲು ಸಂಖ್ಯೆ ೨೦೬೭೬ ಮೈಸೂರು- ಬೆಳಗಾವಿ ಎಕ್ಸ್‌ಪ್ರೆಸ್ ೧೫ ನಿಮಿಷ, ರೈಲು ಸಂಖ್ಯೆ ೨೦೬೫೨ ತಾಳಗುಪ್ಪ- ಬೆಂಗಳೂರು ಎಕ್ಸ್‌ಪ್ರೆಸ್ ಮಾರ್ಗಮಧ್ಯೆ ೪೦ ನಿಮಿಷ ತಡವಾಗಲಿದೆ.
ಅಕ್ಟೋಬರ್ ೨೬ ಮತ್ತು ನವೆಂಬರ್ ೨ ರಂದು ಮಾತ್ರ ರೈಲು ಸಂಖ್ಯೆ ೧೯೬೬೭ ಉದಯಪುರ- ಮೈಸೂರು ಎಕ್ಸ್‌ಪ್ರೆಸ್ ೩೦ ನಿಮಿಷ ತಡವಾಗಲಿದೆ.
ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಬರುವ ಮುನ್ನ ಎನ್‌ಟಿಇಎಸ್ ಆಪ್ ಅಥವಾ ಸಹಾಯವಾಣಿ ೧೩೯ಕ್ಕೆ ಕರೆ ಮಾಡಿ ಮಾಹಿತಿ ಪಡೆಯುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.





















