
ತುಮಕೂರು, ಆ. ೨೨- ಅಷ್ಟೈಶ್ವರ್ಯ ಸಿದ್ದಿಸುವ ವರಮಹಾಲಕ್ಷ್ಮಿ ಹಬ್ಬವನ್ನು ನಾಡಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಿದ್ದು, ಹಬ್ಬದ ವಿಶೇಷವಾಗಿ ಇತಿಹಾಸ ಪ್ರಸಿದ್ದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಮುಂಜಾನೆಯಂದಲೇ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನೆರವೇರಿದವು.
ಹಬ್ಬದ ಅಂಗವಾಗಿ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಅಮ್ಮನವರ ಮೂರ್ತಿ ಸೇರಿದಂತೆ ಇಡೀ ದೇಗುಲವನ್ನು ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿದ್ದು, ಮುಂಜಾನೆಯಿಂದಲೇ ನಾಡಿನ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ಹರಿದು ಬರುತ್ತಿದ್ದಾರೆ.
ಮುಂಜಾನೆಯಿಂದಲೇ ಅಮ್ಮನವರಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದ್ದು, ಬರುವ ಭಕ್ತಾದಿಗಳಿಗಾಗಿ ವಿಶೇಷ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ.
ವರಮಹಾಲಕ್ಷ್ಮಿ ಹಬ್ಬ ಬಂತೆಂದರೆ ನಾಡಿನ ವಿವಿಧೆಡೆಗಳಿಂದ ಶ್ರೀಕ್ಷೇತ್ರ ಗೊರವನಹಳ್ಳಿಗೆ ಭಕ್ತ ಸಾಗರ ಹರಿದು ಬರುವುದು ರೂಢಿ. ಇಂದು ನಸುಕಿನಿಂದಲೇ ಭಕ್ತಾದಿಗಳ ದಂಡು ಗೊರವನಹಳ್ಳಿಗೆ ಹರಿದು ಬರುತ್ತಿದ್ದು, ಸರದಿಯ ಸಾಲಿನಲ್ಲಿ ನಿಂತು ಅಮ್ಮನವರ ದರ್ಶನಾಶೀರ್ವಾದ ಪಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಹಬ್ಬದ ಪ್ರಯುಕ್ತ ಶ್ರೀಕ್ಷೇತ್ರಕ್ಕೆ ಬಂದ ಭಕ್ತಾದಿಗಳಿಗಾಗಿ ಪ್ರಸಾದ ನಿಲಯದಲ್ಲಿ ವಿಶೇಷ ದಾಸೋಹ ಸಹ ವ್ಯವಸ್ಥೆ ಮಾಡಲಾಗಿತ್ತು. ಫ್ರೆಂಡ್ಸ್ ಗ್ರೂಪ್ ವತಿಯಿಂದಲೂ ಪ್ರಸಾದ ವಿತರಣೆ ಸೇವೆ ನಡೆಸಲಾಯಿತು.
ಮುಂಜಾನೆಯಿಂದಲೇ ಗೊರವನಹಳ್ಳಿಗೆ ಹರಿದು ಬರುತ್ತಿರುವ ಭಕ್ತಾದಿಗಳು ಸರದಿಯ ಸಾಲಿನಲ್ಲಿ ನಿಂತು ಶ್ರೀ ಮಹಾಲಕ್ಷ್ಮಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.
ನಂತರ ಶ್ರೀಕ್ಷೇತ್ರದಲ್ಲಿ ಹಬ್ಬದ ಪ್ರಯುಕ್ತ ಭಕ್ತಾದಿಗಳಿಗಾಗಿ ವ್ಯವಸ್ಥೆ ಮಾಡಿದ್ದ ದಾಸೋಹವನ್ನು ಸವಿದು ತಮ್ಮ ಊರುಗಳತ್ತ ತೆರಳುತ್ತಿದ್ದ ದೃಶ್ಯಗಳು ಕಂಡು ಬಂದವು.
ಗೊರವನಹಳ್ಳಿಯಲ್ಲಿ ಬರುವ ಭಕ್ತಾದಿಗಳ ವಾಹನಗಳ ನಿಲುಗಡೆ ಸೇರಿದಂತೆ ಯಾವುದೇ ರೀತಿಯ ತೊಂದರೆಗಳಾಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು.

































