Home ಜಿಲ್ಲೆ ಬೆಂಗಳೂರು ವಂದೇ ಮಾತರಂ’ ಭಾರತೀಯರ ಹೆಮ್ಮೆ: ರಾಜ್ಯಪಾಲ ಗೆಹ್ಲೋಟ್

ವಂದೇ ಮಾತರಂ’ ಭಾರತೀಯರ ಹೆಮ್ಮೆ: ರಾಜ್ಯಪಾಲ ಗೆಹ್ಲೋಟ್

ಬೆಂಗಳೂರು, ಅ.೧೮- ‘ವಂದೇ ಮಾತರಂ’ ಕೇವಲ ಪದಗುಚ್ಛವಲ್ಲ, ಅದು ಭಾರತದ ಆತ್ಮ ಮತ್ತು ದೇಶದ ಹೆಮ್ಮೆಯ ಸಂಕೇತ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.


ನಗರದ ಲೋಕ ಭವನದಲ್ಲಿ ವಿಜಯನಗರ ಮಾರುತಿ ಮೆಡಿಕಲ್ಸ್‌ನ ಗೋಸೇವಕ ಹಾಗೂ ಚಲನಚಿತ್ರ ನಿರ್ಮಾಪಕ ಮಹೇಂದ್ರ ಮುನೋಟ್ ನಿರ್ಮಿಸಿರುವ ‘ವಂದೇ ಮಾತರಂ’ ಗೀತೆಯ ಹೊಸ ಆಡಿಯೋ ಆವೃತ್ತಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ರಾಷ್ಟ್ರಗೀತೆಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ದೇಶದ ಗೌರವ ಮತ್ತು ಏಕತೆಯನ್ನು ಎತ್ತಿಹಿಡಿಯುವಲ್ಲಿ ಇಂತಹ ಪ್ರಯತ್ನಗಳು ಮಹತ್ವದ್ದಾಗಿವೆ ಎಂದು ಅಭಿಪ್ರಾಯಪಟ್ಟರು.


ನಿರ್ಮಾಪಕ ಮಹೇಂದ್ರ ಮುನೋಟ್ ಮಾತನಾಡಿ, ಬಂಕಿಮ್ ಚಂದ್ರ ಚಟರ್ಜಿ ರಚಿಸಿರುವ ‘ವಂದೇ ಮಾತರಂ’ ಭಾರತೀಯರ ರಾಷ್ಟ್ರೀಯ ಭಾವನೆಯ ಪ್ರತೀಕವಾಗಿದೆ. ರಾಷ್ಟ್ರಗೀತೆ, ರಾಷ್ಟ್ರಗಾನ, ರಾಷ್ಟ್ರಧ್ವಜ ಹಾಗೂ ಸಂವಿಧಾನವನ್ನು ಗೌರವಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಇರಬೇಕು. ಶಾಲಾ ಹಂತದಿಂದಲೇ ಮಕ್ಕಳಲ್ಲಿ ದೇಶಭಕ್ತಿಯ ಭಾವನೆ ಬೆಳೆಸುವ ಉದ್ದೇಶದಿಂದ ಈ ಹೊಸ ಆವೃತ್ತಿಯನ್ನು ರೂಪಿಸಲಾಗಿದೆ ಎಂದರು.


ಮಕ್ಕಳು ಸುಲಭವಾಗಿ ಉಚ್ಚರಿಸಲು ಮತ್ತು ಹಾಡಲು ಅನುಕೂಲವಾಗುವಂತೆ ಗೀತೆಯ ಹೊಸ ಆವೃತ್ತಿಯನ್ನು ಸಿದ್ಧಪಡಿಸಲಾಗಿದೆ. ಮಹೇಂದ್ರ ಮುನೋಟ್ ನಿರ್ಮಾಣದ ಈ ಗೀತೆಯನ್ನು ಬಿ.ಪಿ. ಹರಿಹರನ್ ನಿರ್ದೇಶಿಸಿದ್ದು, ಖ್ಯಾತ ಗಾಯಕ ಅಜಯ್ ವಾರಿಯರ್ ಧ್ವನಿ ನೀಡಿದ್ದಾರೆ. ಎ.ಟಿ. ರವೀಶ್ ಸಂಗೀತ ಸಂಯೋಜಿಸಿದ್ದಾರೆ.


ದೇಶಭಕ್ತಿ, ರಾಷ್ಟ್ರೀಯ ಏಕತೆ ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಪ್ರಯತ್ನ ಕೈಗೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದರು.