
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.೨೮:ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬಾಳಿನ ಆಶಾಕಿರಣ ಕನಕ ಪಬ್ಲಿಕ್ ಶಾಲೆ, ಕೇವಲ ಒಂದು ವರ್ಷದಲ್ಲಿಯೇ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದಿದೆ. ಗುಣಮಟ್ಟದ ಶಿಕ್ಷಣ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಕನಕ ಪಬ್ಲಿಕ್ ಶಾಲೆ ಹೆಸರುವಾಸಿಯಾಗಿದೆ ಎಂದು ಮಹಾನಗರ ಪಾಲಿಕೆಯ ಸದಸ್ಯ ರಾಜಶೇಖರ ಕುರಿಯವರು ಹೇಳಿದರು.
ಮಂಗಳವಾರ ನಗರದ ವೀರಶೈವ ಲಿಂಗಾಯತ ಸಭಾ ಭವನದಲ್ಲಿ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ಪಬ್ಲಿಕ್ ಶಾಲೆ ಹಾಗೂ ಕನಕ ನವೋದಯ ಕೋಚಿಂಗ್ ಸ್ಕೂಲ್ ವತಿಯಿಂದ ಹಮ್ಮಿಕೊಂಡ ಬೇಸಿಗೆ ಶಿಬಿರದ ವಿಶೇಷ ಕ್ಲಾಸ್ಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಖ್ಯಾತ ಶಿಕ್ಷಣ ತಜ್ಞರನ್ನು ಒಳಗೊಂಡ ಕನಕ ಪಬ್ಲಿಕ್ ಶಾಲೆ ಶಿಕ್ಷಣ ಕ್ಷೇತ್ರದಲ್ಲಿ ಪಿನಿಕ್ಸ್ ಹಕ್ಕಿಯಂತೆ ಹಾರಿಬಂದು ಹೊಸ ಸಂಚಲನ ಮೂಡಿಸಿದೆ ಎಂದು ಹೇಳಿದರು.
ಸಾಹಿತಿ ಪ್ರೊ. ಎ. ಎಚ್. ಕೊಳಮಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಥಮ ವರ್ಷದಲ್ಲಿಯೇ ಮುರಾರ್ಜಿ, ಆದರ್ಶ ವಿದ್ಯಾಲಯದ ಶಾಲೆಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದರ ಮೂಲಕ ಅತ್ಯುನ್ನತ ಸಾಧನೆಯನ್ನು ನಮ್ಮ ಸಂಸ್ಥೆ ಮಾಡಿದೆ. ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವ ರಾಜ್ಯದಲ್ಲಿಯೇ ಏಕೈಕ ಶಿಕ್ಷಣ ಸಂಸ್ಥೆ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆ ಎಂದು ಹೇಳಿದರು
ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷÀ ವಿ. ಸಿ. ನಾಗಠಾಣ ಮಾತನಾಡಿ, ಗುರುಕುಲ ಶಿಕ್ಷಣ ಪದ್ಧತಿ ಮರು ಕಳಿಸಬೇಕು. ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣವಾಗದೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಹೇಳಿದರು.
ಶಿಕ್ಷಕ ಆರ್. ಎಸ್. ಪಟ್ಟಣಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧೆ, ಪ್ರಾಮಾಣಿಕತೆ, ಏಕಾಗ್ರತೆಯಿಂದ ಓದಿದರೆ ಯಶಸ್ಸು ಶತಸಿದ್ಧ ಎಂದರು.
ಸAಸ್ಥೆಯ ಅಧ್ಯಕ್ಷ ಜಯಪ್ರಭು ಕೊಳಮಲಿ ಮಾತನಾಡಿ, ವಿದ್ಯಾರ್ಥಿ ಜೀವನ ತಪಸ್ಸು ಇದ್ದಂತೆ. ಸತತ ಅಧ್ಯಯನ ಮಾಡಿದರೆ ಗುರಿ ಮುಟ್ಟಲು ಸಾಧ್ಯ, ಅಧ್ಯಯನದ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ಹೊಂದಬೇಕು ಎಂದು ಹೇಳಿದರು.
ವಿಠ್ಠಲ ಮಾನೆ, ಪಾಟಲು ಕರಾಡೆ, ಸಿದ್ದಪ್ಪ ಪೂಜಾರಿ, ಗಣಪತಿ ಒಡೆಯರ್, ಬಾಜಿರಾಯ ಕಾರಡೆ, ಸಂಗಮೇಶ ಕೊಳಮಲಿ, ಬಸವರಾಜ ಪಟೇಲ್, ಸಂಸ್ಥೆಯ ನಿರ್ದೇಶಕರಾದ ರಾಮಸ್ವಾಮಿ ಕೊಳಮಲಿ, ಸರಸ್ವತಿ ಕೊಳಮಲಿ, ರಾಜಶ್ರೀ ಕೊಳಮಲಿ ಉಪಸ್ಥಿತರಿದ್ದರು.