
ಕೋಲಾರ,ಅ,೮- ಪ್ರತಿಭೆಗೆ ಜಾತಿಮತದ ಅಡ್ಡಿಯಿಲ್ಲವೆಂಬುದನ್ನು ಸಾರಿದ ಮಹರ್ಷಿ ವಾಲ್ಮೀಕಿ ಒಂದು ಸಮುದಾಯಕ್ಕೆ ಸೀಮಿತರಲ್ಲ ಅವರೊಬ್ಬ ಇಡೀ ಜನಸಮುದಾಯದ ಆದರ್ಶ ಪುರುಷ ಹಾಗೂ ರಾಮಾಯಣದಂತಹ ಮಹಾಕಾವ್ಯವನ್ನು ಸಮಾಜಕ್ಕೆ ನೀಡಿದ ಆದಿಕವಿ ಎಂದು ಶಾಲೆಯ ಮುಖ್ಯಶಿಕ್ಷಕಿ ತಾಹೇರಾ ನುಸ್ರತ್ ತಿಳಿಸಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ರಾಮನಾಮದ ಮೂಲಕ ಅಪಾರ ಜ್ಞಾನ ಪಡೆದ ವಾಲ್ಮೀಕಿ, ಇಂದಿನ ಯುವ ಸಮುದಾಯಕ್ಕೆ ಆದರ್ಶವಾಗಿದ್ದಾರೆ, ಪ್ರಪಂಚಕ್ಕೆ ರಾಮನಾಮದ ಶಕ್ತಿಯನ್ನು ತಿಳಿಸಿಕೊಟ್ಟ ಮಹಾನ್ ಚೇತನ ಅವರು ಎಂದು ತಿಳಿಸಿದರು.
ಎಸ್‌ಡಿಎಂಸಿ ನಿಕಟಪೂರ್ವ ಅಧ್ಯಕ್ಷ ಎ.ಮಹೇಂದ್ರ ಮಾತನಾಡಿ, ವಾಲ್ಮೀಕಿಯವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಓದಬೇಕು, ಓರ್ವ ವ್ಯಕ್ತಿ ಹಿಂಸೆಯ ಮನಸ್ಸಿನಿಂದ ಹೊರ ಬಂದು ಮಹಾ ಕವಿಯಾದದ್ದರ ಹಿರಿಮೆ ಸಮಾಜಕ್ಕೆ ತಿಳಿಯಬೇಕು ಎಂದರು.
ನಾವು ಮಾಡುವ ಅನ್ಯಾಯ, ಅಕ್ರಮಗಳು ನಮ್ಮನ್ನು ಪಾಪವಾಗಿ ಕಾಡುತ್ತವೆ ಎಂಬ ಸತ್ಯ ಅರಿತ ನಂತರ ರತ್ನಾಕರರಾಗಿದ್ದ ವಾಲ್ಮೀಕಿ ಆದಿಕವಿಯಾದದ್ದರ ಕುರಿತು ಮಕ್ಕಳಿಗೂ ತಿಳಿಸಬೇಕು, ಇಂದು ನಾವು ತಪ್ಪು ಮಾಡಿದರೆ ಆ ಪಾಪ ನಮ್ಮನ್ನು ಕಾಡದಿರದು ಎಂಬ ಸತ್ಯ ಅರಿತು ಸರಿದಾರಿಯಲ್ಲಿ ನಡೆಯಬೇಕಿದೆ ಎಂದರು.
ವಾಲ್ಮೀಕಿಯಂತಹ ಅನೇಕ ಮಹಾನ್ ಪುರುಷರು ನಮಗೆ ದಾರಿದೀಪವಾಗಿದ್ದಾರೆ, ಅವರ ಮಾರ್ಗದಲ್ಲಿ ನಡೆಯೋಣ, ಶೈಕ್ಷಣಿಕವಾಗಿ ಕಲಿತು ಸಮಾಜಕ್ಕೆ ಶಕ್ತಿ ತುಂಬೋಣ ಎಂಬ ಭಾವನೆ ಮಕ್ಕಳಲ್ಲಿ ಬಲಗೊಳ್ಳಬೇಕು, ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಭವಾನಿ, ಶ್ವೇತಾ,ಶ್ರೀನಿವಾಸಲು, ಶ್ರೀನಿವಾಸಲು,ರಮಾದೇವಿ ಸೇರಿದಂತೆ ಪ್ರತಿಬಾ,ಮುತ್ತು, ಎಸ್.ಫಾಲ್ಗುಣಿ ಮತ್ತಿತರರು ಉಪಸ್ಥಿತರಿದ್ದರು.






























