ವಳವಂಡವಾಡಿ ಕೆರೆ ಕಾಮಗಾರಿ ಅಪೂರ್ಣ:ಮಾಜಿಶಾಸಕ ಸುಭಾಷ ಗುತ್ತೇದಾರ ಅಸಮಾಧಾನ

ಕಲಬುರಗಿ,ಜ.24: ಅಳಂದ ತಾಲೂಕಿನ ವಳವಂಡವಾಡಿ ಗ್ರಾಮದ ಕೆರೆ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ,ಕೆರೆಗೆ ಭೂಮಿ ನೀಡಿದ ರೈತರು ಪರಿಹಾರ ಸಿಗದೇ,ಬೆಳೆಯಲು ಭೂಮಿಯೂ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಳಂದ ಕ್ಷೇತ್ರದ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.
ನಗರದ ಪತ್ರಿಕಾಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಾನು ಅಳಂದ ಕ್ಷೇತ್ರದ ಶಾಸಕನಾಗಿದ್ದ ಅವಧಿಯಲ್ಲಿ ವಳವಂಡವಾಡಿ, ತಡಕಲ್,ಕೌಲಗಾ,ಕಡಗಂಚಿ ಸೇರಿದಂತೆ ಐದು ಕಡೆ ಕೆರೆಗಳು ಮಂಜೂರು ಆಗಿದ್ದವು.ವಳವಂಡವಾಡಿ ಕೆರೆಯ ಅರ್ಧ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಈಗ ಶಾಸಕ ಬಿ.ಆರ್ ಪಾಟೀಲರ ಅವಧಿಯಲ್ಲಿ ವಳವಂಡವಾಡಿ ಗ್ರಾಮದ ಕೆರೆಗೆ ಬದಲಿ ಕಾಮಗಾರಿಗಾಗಿ ಅನುಮೋದನೆ ನೀಡಲಾಗಿದೆ. ಕಾಮಗಾರಿ ಇನ್ನೂ ಆರಂಭವಾಗದೇ ನೆನೆಗುದಿಗೆ ಬಿದ್ದಿದೆ.ಗುತ್ತಿಗೆದಾರರ ಬಿಲ್ ಪಾವತಿ ಆಗಿಲ್ಲ.ರೈತರ ಸುಮಾರು 5 ಕೋಟಿ ರೂ ಪರಿಹಾರ ಸಹ ಪಾವತಿ ಆಗಿಲ್ಲ ಎಂದರು.
ವಳವಂಡವಾಡಿ ಗ್ರಾಮದ ಕೆರೆಗಾಗಿ 27 ರೈತರು 125 ಎಕರೆ ಜಮೀನು ನೀಡಿದ್ದಾರೆ.200 ಕೆರೆಗಳ ನಿರ್ಮಾಣ ಮಾಡುವದಾಗಿ ಹೇಳಿದ ಬಿ ಆರ್ ಪಾಟೀಲರು ಒಂದೂ ಕೆರೆ ಕಾಮಗಾರಿ ಪೂರ್ಣಗೊಳಿಸಿಲ್ಲ.ಅವರು ಹೇಳುವದು ಒಂದು ಮಾಡುವದು ಒಂದು ಎಂದು ಕಿಡಿ ಕಾರಿದರು.
ವಳವಂಡವಾಡಿ ಗ್ರಾಮದ ಕೆರೆಗೆ ಜಮೀನು ನೀಡಿದ ರೈತರು ಕಂಗಾಲಾಗಿದ್ದಾರೆ.ಸಿರಪುರ ಮಾದರಿ ಬಗ್ಗೆ ಪದೇ ಪದೇ ಹೇಳುವ ಬಿ.ಆರ್ ಪಾಟೀಲರು ರೈತರು ಕಣ್ಣಿರಲ್ಲಿ ಕೈತೊಳೆದುಕೊಳ್ಳುವಂತೆ ಮಾಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಂ.ಎಸ್ ಪಾಟೀಲ ತಂಬಾಕವಾಡಿ,ಬಸವರಾಜ ಬಿರಾದಾರ,ವೀರಣ್ಣ ಕಡಗಂಚಿ,ಸಿದ್ರಾಮಪ್ಪ ಬಿರಾದಾರ,ಸಂತೋಷ ಹಾದಿಮನಿ,ಶಿವರಾಜ ಅವರಳ್ಳಿ,ಜಗದೀಶ ಬಿರಾದಾರ ಮತ್ತು ವಳವಂಡವಾಡಿ ಗ್ರಾಮದ ರೈತರು,ರೈತ ಮಹಿಳೆಯರು ಇದ್ದರು.