
ಕಲಬುರಗಿ : ‘ವೈದೇಹಿ’ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ‘ಜಾನಕಿ ಶ್ರೀನಿವಾಸಮೂರ್ತಿ’ಯವರು ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರು. ಸಣ್ಣಕಥೆ, ಕಾವ್ಯ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಮುಂತಾದವುಗಳಲ್ಲಿ ತೊಡಗಿಕೊಂಡಿದ್ದಾರೆ. ‘ವಾಸಂತಿ’ ಎಂಬುದು ಇವರ ಮೂಲ ಹೆಸರು. ಸಾಹಿತ್ಯಕ್ಕಾಗಿ ಹಲವು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಕ್ರೌಂಚ ಪಕ್ಷಿಗಳು ಎಂಬ ಕಥಾಸಂಕಲನಕ್ಕೆ 2009ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪದ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವೈದೇಹಿಯವರ ಜನ್ಮದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮರ ಗಿಡ ಬಳ್ಳಿ,ಅಂತರಂಗದ ಪುಟಗಳು, ಗೋಲ,ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗೆ, ಅಮ್ಮಚ್ಚಿ ಎಂಬ ನೆನಪು, ಕ್ರೌಂಚ ಪಕ್ಷಿಗಳು, ಕತೆಕತೆ ಕಾರಣ, ಬಿಂದು ಬಿಂದಿಗೆ,ಪಾರಿಜಾತ, ಹೂವಕಟ್ಟುವ ಕಾಯಕ, ದೀಪದೊಳಗಿನ ದೀಪ, ಅಸ್ಪೃಶ್ಯರು ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅನೇಕ ಪ್ರಶಸ್ತಿ-ಪುರಸ್ಕಾರ, ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಡಾ.ರಾಜಶೇಖರ ಪಾಟೀಲ, ದತ್ತು ಹಡಪದ, ಶಿವಯೋಗೆಪ್ಪಾ ಎಸ್. ಬಿರಾದಾರ, ಅಸ್ಲಾಂ ಶೇಖ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.





















